ಕೊನೆ ಕ್ಷಣದ ನಾಟಕೀಯ ಕುಸಿತದ ನಡುವೆಯೂ ಸೂರ್ಯಕುಮಾರ್ ಯಾದವ್(80) ಹಾಗೂ ಇಶಾನ್ ಕಿಶನ್(58) ಅವರುಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ವಿಶಾಖಪಟ್ಟಣಂನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 208/3 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಜೋಶ್ ಇಂಗ್ಲಿಸ್(110) ಹಾಗೂ ಸ್ವೀವ್ ಸ್ಮಿತ್(52) ತಂಡಕ್ಕೆ ಆಸರೆಯಾದರು. ಈ ಟಾರ್ಗೆಟ್ ಚೇಸ್ ಮಾಡಿದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್‌ಗಳಿಸುವ ಮೂಲಕ ಗೆಲುವಿನ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಇಂಗ್ಲಿಸ್ ಸ್ಪೋಟಕ ಶತಕ:
ಟಾಸ್ ಸೋತರು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 31 ರನ್‌ಗಳಿಗೆ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಶಾರ್ಟ್(13) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಜೊತೆಯಾದ ಸ್ಟೀವ್ ಸ್ಮಿತ್(52) ಹಾಗೂ ಜೋಶ್ ಇಂಗ್ಲಿಸ್(110) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಭಾರತದ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ 130 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಪ್ರಮುಖವಾಗಿ ಜೋಶ್ ಇಂಗ್ಲಿಸ್, ಕೇವಲ 50 ಬಾಲ್‌ಗಳಲ್ಲಿ 11 ಬೌಂಡರಿ, 8 ಸಿಕ್ಸರ್ ನೆರವಿನಿಂದ 110 ರನ್‌ಗಳಿಸಿ ಅಬ್ಬರದ ಶತಕ ಬಾರಿಸಿದರು. ಈ ಇಬ್ಬರು ಔಟಾದ ಬಳಿಕ ಬಂದ ಸ್ಟಾಯ್ನಿಸ್(7*) ಹಾಗೂ ಡೇವಿಡ್(19*) ತಂಡದ ಮೊತ್ತವನ್ನ 208ಕ್ಕೆ ಏರಿಸಿದರು. ಭಾರತದ ಪರ ಪ್ರಸಿದ್ಧ ಕೃಷ್ಣ ಹಾಗೂ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
ಸೂರ್ಯ-ಕಿಶನ್ ಆರ್ಭಟ:
ಆಸೀಸ್ ನೀಡಿದ 209 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಇನ್ನಿಂಗ್ಸ್ ಆರಂಭದಲ್ಲೇ ಋತುರಾಜ್(0) ಹಾಗೂ ಜೈಸ್ವಾಲ್(21) ಅವರುಗಳ ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಇಶಾನ್ ಕಿಶನ್(58 ರನ್, 39 ಬಾಲ್, 2 ಬೌಂಡರಿ, 5 ಸಿಕ್ಸ್) ಹಾಗೂ ಸೂರ್ಯಕುಮಾರ್(80 ರನ್, 42 ಬಾಲ್, 9 ಬೌಂಡರಿ, 4 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರು 112 ರನ್‌ಗಳ ಜೊತೆಯಾಟದ ಮೂಲಕ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಆದರೆ ನಂತರ ಬಂದ ತಿಲಕ್ ವರ್ಮ(12), ಅಕ್ಸರ್(2), ರವಿ ಬಿಷ್ಣೋಯಿ(0) ಅರ್ಶದೀಪ್(0) ಬಹುಬೇಗನೆ ಪೆವಿಲಿಯನ್ ಸೇರಿದರು. ಆದರೆ ಕೊನೆಯ ಎಸೆತದವರೆಗೂ ಕಣದಲ್ಲಿ ಉಳಿದ ರಿಂಕು ಸಿಂಗ್(22*) ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಆಸೀಸ್ ಪರ ಸಾಂಘ 2 ವಿಕೆಟ್ ಪಡೆದರೆ. ಬೆಹ್ರನ್‌ಡ್ರಾಫ, ಶಾರ್ಟ್, ಅಬೋಟ್ ತಲಾ 1 ವಿಕೆಟ್ ಪಡೆದರು. ಭರ್ಜರಿ ಬ್ಯಾಟಿಂಗ್‌ನಿಂದ ತಂಡದ ಗೆಲುವಿಗೆ ಕಾರಣವಾದ ನಾಯಕ ಸೂರ್ಯಕುಮಾರ್ ಯಾದವ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟಿ20 ಸರಣಿಯ 2ನೇ ಟಿ20 ಪಂದ್ಯ ನ.26ರಂದು ತಿರುವನಂತಪುರಂನಲ್ಲಿ ನಡೆಯಲಿದೆ.
IND v AUS, Team India, Australia, Suryakumar Yadav, T20I Series