ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ ಸಜ್ಜಾಗಿರುವ ಟೀಂ ಇಂಡಿಯಾ ಅ.8ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕಾಗಿ ತಯಾರಿ ಮಾಡಿಕೊಂಡಿದೆ.
ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯುವ ಹೈವೋಲ್ಟೇಜ್ ಕಾದಾಟಕ್ಕೆ ಉಭಯ ತಂಡಗಳು ತಮ್ಮದೇ ರಣತಂತ್ರ ರೂಪಿಸಿಕೊಂಡಿವೆ. ಇನ್ನೂ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಜಯಭೇರಿ ಬಾರಿಸುವ ಮೂಲಕ ಶುಭಾರಂಭ ಮಾಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿವೆ. ಈ ಮಹತ್ವದ ಹಣಾಹಣಿಯಲ್ಲಿ ಉಭಯ ತಂಡಗಳ ಸ್ಟಾರ್ ಪ್ಲೇಯರ್‌ಗಳ ಪ್ರದರ್ಶನ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಎರಡು ತಂಡಗಳ ರೋಚಕ ಕದನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ. ಶುಭ್ಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಟಾಪ್ ಆರ್ಡರ್‌ನಲ್ಲಿ ಭಾರತ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿ ಅಬ್ಬರಿಸಲು ಹಿಟ್‌ಮ್ಯಾನ್ ಕಾದಿದ್ದಾರೆ. ಇವರೊಂದಿಗೆ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತದ ಬ್ಯಾಟಿಂಗ್ ಶಕ್ತಿಯಾಗಿರುವ ಕಿಂಗ್ ಕೊಹ್ಲಿ ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ತಂಡಕ್ಕೆ ಯಶಸ್ಸು ನೀಡಲು ಸಜ್ಜಾಗಿದ್ದಾರೆ. ಈ ಇಬ್ಬರು ಬ್ಯಾಟಿಂಗ್ ಸೂಪರ್ ಸ್ಟಾರ್‌ಗಳ ಜೊತೆಗೆ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಕಾಂಗರೂ ಪಡೆಯ ಬ್ಯಾಟರ್‌ಗಳ ಆಟಕ್ಕೆ ಕಡಿವಾಣ ಹಾಕುವ ನಿರೀಕ್ಷೆ ಮೂಡಿಸಿದ್ದಾರೆ.
ಚೆನ್ನೈನಲ್ಲಿ ನಡೆಯುವ ಹೈವೋಲ್ಟೇಜ್ ಕಾಳಗಕ್ಕೆ ಟೀಂ ಇಂಡಿಯಾದ ಆಟಗಾರರು ಸಜ್ಜಾಗಿರುವಂತೆ ಆಸೀಸ್ ಪಡೆಯ ಆಟಗಾರರು ಕೂಡ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ಆಲ್ರೌಂಡರ್ ಮಿಚೆಲ್ ಮಾರ್ಷ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಮ್ಮ ಅದ್ಭುತ ಆಟದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಅತ್ಯುತ್ತಮ ಫಾರ್ಮ್‌ನಲ್ಲಿರುವ ಮಾರ್ಷ್, ಟೀಂ ಇಂಡಿಯಾಕ್ಕೆ ಟಕ್ಕರ್ ಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ಇವರೊಂದಿಗೆ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಆಸೀಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರಿಬ್ಬರ ಜೊತೆಗೆ ಮತ್ತೋರ್ವ ಅನುಭವಿ ಆಟಗಾರ ಮಿಚೆಲ್ ಮಾರ್ಷ್ ಸಹ ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ.