ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯ ಫೈನಲ್ ಫೈಟ್‌ಗಾಗಿ ವೇದಿಕೆ ಸಜ್ಜಾಗಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹಣಾಹಣಿ ನಡೆಸುತ್ತಿವೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು, ಸಿನಿಮಾ ನಟ-ನಟಿಯರು, ರಾಜಕೀಯ ನಾಯಕರು, ಕ್ರೀಡಾಪಟುಗಳು ರೋಹಿತ್ ಪಡೆಗೆ ಶುಭಕೋರಿದ್ದಾರೆ. ಐತಿಹಾಸಿಕ ವಿಶ್ವಕಪ್ ಫೈನಲ್ ಹಣಾಹಣಿ ಟೀಂ ಇಂಡಿಯಾ ಆಟಗಾರರಿಗೆ ಅತ್ಯಂತ ಮಹತ್ವದ್ದಾಗಿದ್ದು, ಈ ನಡುವೆ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಅಗ್ನಿಪರೀಕ್ಷೆಯಾಗಿದೆ.
ಪ್ರಮುಖವಾಗಿ ಎರಡು ದಶಕಗಳ ಹಿಂದೆ ಟೀಂ ಇಂಡಿಯಾ ಆಟಗಾರನಾಗಿ ಮಾಡಲಾಗದ ಸಾಧನೆಯನ್ನ ಇದೀಗ ಕೋಚ್ ಆಗಿ ಮಾಡುವ ಮಹತ್ತರ ಅವಕಾಶ “ದಿ ವಾಲ್” ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಲಭಿಸಿದೆ. ಈ ಹಿಂದೆ 2003 ಏಕದಿನ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್, ಭಾರತದ ಪ್ರಮುಖ ಬ್ಯಾಟರ್ ಆಗಿದ್ದರು. ಅಂದು ಉಪ-ನಾಯಕನಾಗಿದ್ದ ರಾಹುಲ್ ದ್ರಾವಿಡ್‌ಗೆ ವಿಶ್ವಕಪ್ ಗೆಲ್ಲುವ ಅದೃಷ್ಟ ಒಲಿದು ಬಂದಿರಲಿಲ್ಲ. ಅಂದು ಆಸ್ಟ್ರೇಲಿಯಾ ವಿರುದ್ಧ ಎದುರಾಗಿದ್ದ ವಿಶ್ವಕಪ್ ಫೈನಲ್‌ನ ಸೋಲಿನ ಆಘಾತಕ್ಕೆ ಇಂದು ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಆದರೆ ಅಂದು ತಂಡದ ಆಟಗಾರನಾಗಿದ್ದ ರಾಹುಲ್ ದ್ರಾವಿಡ್, ಇದೀಗ ಕೋಚ್ ಆಗಿ ಭಾರತವನ್ನ ಚಾಂಪಿಯನ್ ತಂಡವನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ರಣತಂತ್ರ ರೂಪಿಸಿಕೊಂಡು ಸಜ್ಜಾಗಿದ್ದಾರೆ. 2003ರಲ್ಲಿ ಭಾರತ ತಂಡಕ್ಕೆ ಸೋಲಿನ ಆಘಾತ ನೀಡಿದ್ದ ಆಸ್ಟ್ರೇಲಿಯಾ ತಂಡವೇ 2023ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಎದುರಾಳಿಯಾಗಿದೆ. ಹೀಗಾಗಿ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಆಟಗಾರರ ಮೂಲಕ 2003ರ ವಿಶ್ವಕಪ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ದ್ರಾವಿಡ್ ಕಾಯುತ್ತಿದ್ದು, ಇವರಿಗೆ ನಿರೀಕ್ಷಿತ ಯಶಸ್ಸು ಲಭಿಸಲಿ ಎಂಬುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.
IND v AUS, Team India, Australia, Rahul Dravid, World Cup Final