ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು, ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಮೂರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ, ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಮುರಿಯುವ ಜೊತೆಗೆ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುವ ಅವಕಾಶ ಹೊಂದಿದೆ.
– ಏಕದಿನ ವಿಶ್ವಕಪ್ನಲ್ಲಿ ಈಗಾಗಲೇ 1983 ಮತ್ತು 2011ರಲ್ಲಿ ಪ್ರಶಸ್ತಿ ಗೆದ್ದುಬೀಗಿರುವ ಭಾರತ, ಮತ್ತೊಂದು ಟ್ರೋಫಿ ಗೆದ್ದರೆ ಶ್ರೀಲಂಕಾವನ್ನು ಸೋಲಿಸಿದ ನಂತರ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡವಾಗಲಿದೆ.
– ಪ್ರಸಕ್ತ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಹೊಂದಿರುವ ವಿರಾಟ್ ಕೊಹ್ಲಿ(711 ರನ್) ಇಂದಿನ ಪಂದ್ಯದಲ್ಲಿ ಮತ್ತೊಂದು ಭರ್ಜರಿ ಇನ್ನಿಂಗ್ಸ್ ಪ್ರದರ್ಶಿಸಿದರೆ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ.
– ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ 550 ರನ್ಗಳಿಸಿದ್ದು, ಇಂದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದೇ ಆದಲ್ಲಿ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ತಮ್ಮದೇ ವೈಯಕ್ತಿಕ ದಾಖಲೆಯನ್ನು ಮುರಿಯಬಹುದು.
– ಪ್ರಸಕ್ತ ಟೂರ್ನಿಯಲ್ಲಿ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ವೇಗದ ಬೌಲರ್ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 54 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇಂದಿನ ಫೈನಲ್ನಲ್ಲಿ ಆಸೀಸ್ ವಿರುದ್ಧ ಮೂರು ವಿಕೆಟ್ ಪಡೆದೆರ ಪಾಕಿಸ್ತಾನದ ಶ್ರೇಷ್ಠ ಬೌಲರ್ ವಾಸಿಂ ಅಕ್ರಮ್ (55 ವಿಕೆಟ್), ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ(56 ವಿಕೆಟ್) ಅವರುಗಳನ್ನ ಹಿಂದಿಕ್ಕಿ ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ಗಳನ್ನ ಪಡೆದ ನಾಲ್ಕನೇ ಬೌಲರ್ ಎನಿಸಲಿದ್ದಾರೆ.
– ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿರುವ ಶ್ರೇಯಸ್ ಅಯ್ಯರ್ ಫೈನಲ್ನಲ್ಲಿ 24 ರನ್ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರದಲ್ಲಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ರನ್ಗಳಿಸಿದ(550ಕ್ಕೂ ಹೆಚ್ಚು ರನ್ಗಳು) ಭಾರತದ ನಾಲ್ಕನೇ ಬ್ಯಾಟರ್ ಆಗಲಿದ್ದಾರೆ.
IND v AUS, Team India, Australia, Virat Kohli, World Cup Final