ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ವಿಶ್ವ ಕ್ರಿಕೆಟ್ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಮೂಲಕ ತಮ್ಮ ವಿರಾಟ ರೂಪ ತೋರಿದ್ದಾರೆ.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ, ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಬಾಂಗ್ಲಾ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಚೇಸ್ ಮಾಸ್ಟರ್ ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 48ನೇ ಶತಕ ದಾಖಲಿಸಿ ಅಬ್ಬರಿಸಿದರು. ಇದು ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ 3ನೇ ಶತಕವಾಗಿದ್ದು, ಕೊಹ್ಲಿಯ ಶ್ರೇಷ್ಠ ಇನ್ನಿಂಗ್ಸ್‌ನ ಮೂಲಕ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿತು.
ಬಾಂಗ್ಲಾ ನೀಡಿದ 257 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಪರಿಣಾಮ ಕೊಹ್ಲಿ ಅವರಿಗೆ ಸೆಂಚುರಿ ಹೊಡೆಯುವುದು ಸುಲಭವಾಗಿರಲಿಲ್ಲ. ಅಲ್ಲದೇ ಭಾರತದ ಗೆಲುವಿಗೆ 19 ರನ್‌ಗಳ ಅಗತ್ಯವಿದ್ದಾಗ ಕೊಹ್ಲಿ ಸೆಂಚುರಿ ಬಾರಿಸಲು ಸಹ 19 ರನ್‌ಗಳು ಬೇಕಿತ್ತು. ಹೀಗಾಗಿ ಕೊಹ್ಲಿ ಬ್ಯಾಟ್‌ನಿಂದ ಮತ್ತೊಂದು ಶತಕದ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಲ್ಲಿ ಸ್ವಲ್ಪಮಟ್ಟಿಗೆ ತಳಮಳ ಮೂಡಿಸಿತ್ತು.
ಕೊಹ್ಲಿಗೆ ರಾಹುಲ್ ಸಾಥ್:
ಭರ್ಜರಿ ಬ್ಯಾಟಿಂಗ್‌ನಿಂದ ಶತಕದ ಹೊಸ್ತಿಲಲ್ಲಿದ್ದ ಕೊಹ್ಲಿಗೆ ಸೆಂಚುರಿ ಬಾರಿಸಲು ಕೆಎಲ್ ರಾಹುಲ್ ಸಾಥ್ ಕೊಟ್ಟರು. ಮತ್ತೊಂದು ಎಂಡ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್, ತಾವು ಸ್ಟ್ರೈಕ್‌ಗೆ ಬಂದ ವೇಳೆಯಲ್ಲಿ ಯಾವುದೇ ರನ್‌ಗಳಿಸದೆ ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಾಗಿ ಸ್ಟ್ರೈಕ್ ಬಿಟ್ಟುಕೊಟ್ಟರು. ಹೀಗಾಗಿ ಸಿಂಗಲ್ ಹಾಗೂ ಡಬಲ್ಸ್ ಮೂಲಕ ಶತಕದ ಹೊಸ್ತಿಲಿಗೆ ಬಂದ ಕೊಹ್ಲಿ, ಕೊನೆಯಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಶತಕದ ಸಂಭ್ರಮ ಆಚರಿಸಿದರು. ಕೊಹ್ಲಿ ಹಾಗೂ ರಾಹುಲ್ ಅವರ ಜಾಣ್ಮೆಯ ಆಟಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.
IND v BAN, Team India, ODI Cricket, World Cup, Virat Kohli