ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಜಯದ ಅಲೆಯಲ್ಲಿ ತೇಲುತ್ತಿರುವ ಭಾರತ, ಮತ್ತೊಂದು ಯಶಸ್ವಿ ಚೇಸಿಂಗ್ ಮೂಲಕ ಸತತ ನಾಲ್ಕನೇ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.
ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಈವರೆಗೂ ನಾಲ್ಕು ಪಂದ್ಯಗಳನ್ನ ಆಡಿದ್ದು 4 ಪಂದ್ಯಗಳಲ್ಲೂ ಯಶಸ್ವಿ ಚೇಸಿಂಗ್ ಮಾಡಿದೆ. ಆ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಚೇಸ್ ಕಿಂಗ್ ಆಗಿ ಅಬ್ಬರಿಸಿದೆ. ಬಾಂಗ್ಲಾದೇಶ ವಿರುದ್ಧ ನಡೆದ ನಾಲ್ಕೇ ಪಂದ್ಯದಲ್ಲೂ ಭರ್ಜರಿ ಚೇಸಿಂಗ್ ಮೂಲಕ 7 ವಿಕೆಟ್‌ಗಳ ಅತ್ಯುತ್ತಮ ಗೆಲುವು ಸಾಧಿಸಿದ ಭಾರತ ಆ ಮೂಲಕ 2023ರ ಏಕದಿನ ವಿಶ್ವಕಪ್‌ನಲ್ಲಿ ಸೋಲನ್ನೇ ಕಾಣದ ತಂಡವನ್ನ ಮುನ್ನುಗ್ಗುತ್ತಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಭಾರತ, ನಂತರ 6 ವಿಕೆಟ್‌ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಇದರೊಂದಿಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಚೇಸಿಂಗ್‌ನಲ್ಲಿ ಮೊದಲ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ನಂತರ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ನಂತರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸಹ ಭರ್ಜರಿ ಆಟವಾಡಿದ ಭಾರತ, 7 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್ ಜಯ ಸಾಧಿಸಿತ್ತು.
ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾ ತಂಡ ನೀಡಿದ್ದ 257 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತ, ವಿರಾಟ್ ಕೊಹ್ಲಿ(103*) ಅವರ ಶತಕ ಹಾಗೂ ಶುಭ್ಮನ್ ಗಿಲ್(53) ಅವರ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್‌ಗೆ 261 ರನ್‌ಗಳಿಸುವ ಮೂಲಕ 7 ವಿಕೆಟ್‌ಗಳಿಂದ ಗೆದ್ದುಬೀಗಿದೆ. ಈ ಗೆಲುವು ಪ್ರಸಕ್ತ ವಿಶ್ವಕಪ್‌ನಲ್ಲಿ ರೋಹಿತ್ ಪಡೆಗೆ ಚೇಸಿಂಗ್‌ನಲ್ಲಿ ಲಭಿಸಿದ 4ನೇ ಗೆಲುವಾಗಿದೆ. ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸತತ ನಾಲ್ಕು ಗೆಲುವು ಕಂಡಿರುವ ಭಾರತ ವಿಶ್ವಕಪ್‌ನಲ್ಲಿ ಚೇಸಿಂಗ್‌ನಲ್ಲಿ ಕಿಂಗ್ ಎನಿಸಿದ್ದು, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಎದುರಾಗುವ ತಂಡಗಳಿಗೆ ದೊಡ್ಡ ಎಚ್ಚರಿಕೆ ನೀಡಿದೆ.
IND v BAN, Team India, ODI Cricket, World Cup, Virat Kohli