ಟೀಂ ಇಂಡಿಯಾದ “ರನ್ ಮಷಿನ್” ವಿರಾಟ್ ಕೊಹ್ಲಿ ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಆಕರ್ಷಕ ಬ್ಯಾಟಿಂಗ್ನಿಂದ ಮಿಂಚಿರುವ ಕಿಂಗ್ ಕೊಹ್ಲಿ, ಟೀಂ ಇಂಡಿಯಾದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಎರಡು ಅರ್ಧಶತಕಗಳನ್ನ ಬಾರಿಸಿರುವ ಚೇಸ್ ಮಾಸ್ಟರ್, ಇದೀಗ ಪಾಕಿಸ್ತಾನ ವಿರುದ್ಧ ನಡೆಯುವ ಹೈವೋಲ್ಟೇಜ್ ಕದನಕ್ಕೆ ಸಜ್ಜಾಗಿದ್ದಾರೆ. ವಿರಾಟ್ ಕೊಹ್ಲಿಗೆ ಪಾಕಿಸ್ತಾನ ನೆಚ್ಚಿನ ಎದುರಾಳಿಯಾಗಿದ್ದು, ಏಕದಿನ ಕ್ರಿಕೆಟ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಬಾಬರ್ ಆಜ಼ಂ ಬಳಗದ ವಿರುದ್ಧ ಮತ್ತೊಂದು ಅವಿಸ್ಮರಣೀಯ ಇನ್ನಿಂಗ್ಸ್ ಆಡುವ ತವಕದಲ್ಲಿದ್ದಾರೆ.
ಪಾಕಿಸ್ತಾನದ ವಿರುದ್ಧ ಈವರೆಗೂ 15 ಏಕದಿನ ಪಂದ್ಯಗಳನ್ನ ಆಡಿರುವ ಕಿಂಗ್ ಕೊಹ್ಲಿ, 55.17ರ ಬ್ಯಾಟಿಂಗ್ ಸರಾಸರಿಯೊಂದಿಗೆ 662 ರನ್ಗಳಿಸಿ ಮಿಂಚಿದ್ದಾರೆ. ಪಾಕ್ ವಿರುದ್ಧ ಮೂರು ಶತಕಗಳನ್ನ ಸಹ ಬಾರಿಸಿರುವ ವಿರಾಟ್, ಇತ್ತೀಚೆಗೆ ಏಷ್ಯಾಕಪ್ನಲ್ಲೂ ಸಹ ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಹಿಂದೆ 2015ರ ಏಕದಿನ ವಿಶ್ವಕಪ್ನಲ್ಲಿ 107 ರನ್ ಬಾರಿಸಿ ಭಾರತದ ಗೆಲುವಿನ ಹೀರೋ ಆಗಿದ್ದರು.
ಇನ್ನೂ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿರುವ 3 ಪಂದ್ಯಗಳಲ್ಲೂ ಕಿಂಗ್ ಕೊಹ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಪಾಕ್ ತಂಡದ ವಿರುದ್ಧ ಬ್ಯಾಟಿಂಗ್ನಲ್ಲಿ ಮಿಂಚಿರುವ ಕೊಹ್ಲಿ, 64.33ರ ಸರಾಸರಿಯಲ್ಲಿ 193 ರನ್ಗಳಿಸಿದ್ದಾರೆ. ಇದೀಗ ನಾಲ್ಕನೇ ವಿಶ್ವಕಪ್ ಪಂದ್ಯಕ್ಕಾಗಿ ತಯಾರಿ ಮಾಡಿಕೊಂಡಿರುವ ವಿರಾಟ್ ಕೊಹ್ಲಿ, ಸತತ ಎರಡು ಅರ್ಧಶತಕಗಳನ್ನ ಬಾರಿಸಿ ಅತ್ಯುತ್ತಮ ಬ್ಯಾಟಿಂಗ್ ಲಯದಲ್ಲಿದ್ದು, ಪಾಕ್ ವಿರುದ್ದವೂ ಅದ್ಭುತ ಆಟವಾಡುವ ನಿರೀಕ್ಷೆ ಹೆಚ್ಚಾಗಿದೆ.
IND v PAK, Team India, Pakistan, Virat Kohli, World Cup