ಧವನ್ ಗೆ ವಿಶ್ರಾಂತಿ.. ವೆಂಕಟೇಶ್ ಓಪನಿಂಗ್ ಚಾನ್ಸ್.. ಭುವಿ ಬದಲಿಗೆ ಚಹಾರ್ ಗೆ ಮಣೆ
ಇತಿಹಾಸ ನಿರ್ಮಿಸುವ ಸಂಕಲ್ಪದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ 1-2 ಅಂತರದೊಂದಿಗೆ ನಿರಾಸೆ ಅನುಭವಿಸಿದ್ದರೇ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಸೋತಿದೆ. ಹೀಗಾಗಿ ಇಂದು ನಡೆಯಲಿರುವ ಮೂರನೇ ಏಕದಿನ ಪಂದ್ಯ ಭಾರತಕ್ಕೆ ಮಾನ ಉಳಿಸಿಕೊಳ್ಳಲು ಕೊನೆಯ ಚಾನ್ಸ್ ಆಗಿದೆ.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದ್ದು, ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಮುಖ್ಯವಾಗಿ ಸೂರ್ಯಕುಮಾರ್ ಯಾದವ್ ಗೆ ಚಾನ್ಸ್ ನೀಡಬೇಕು. ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಕೆಲವು ಪ್ರಯೋಗಗಳನ್ನು ಮಾಡಬೇಕಾಗಿದೆ ಎಂದು ಸಂಜಯ್ ಪ್ರತಿಪಾದಿಸಿದ್ದಾರೆ.
ಶಿಖರ್ ಧವನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ರೆಡಿ ಮೇಡ್ ಆಪ್ಷನ್ ಆಗಿದ್ದು, ಅವರಂತೆ ಮತ್ತೊಬ್ಬ ಆಟಗಾರರನ್ನು ಹುಡುಕುವ ಅವಕಾಶವಿದೆ. ಹಾಗಾಗಿ ಧವನ್ ಗೆ ವಿಶ್ರಾಂತಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಓಪನರ್ ಆಗಿ ಪ್ರಯೋಗ ಮಾಡಬೇಕು. ಜೊತೆಗೆ ಸೂರ್ಯಕುಮಾರ್ ಯಾದವ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಸೇರಿಸಿಕೊಳ್ಳಬೇಕು ಎಂದು ಸಂಜಯ್ ಸಲಹೆ ನೀಡಿದ್ದಾರೆ.
ಬೌಲರ್ಗಳ ಬಗ್ಗೆ ಹೇಳುವುದಾದರೆ… ಭುವನೇಶ್ವರ್ ಕುಮಾರ್ ಬದಲಿಗೆ ದೀಪಕ್ ಚಹಾರ್ಗೆ ಚಾನ್ಸ್ ನೀಡಬೇಕು. ಶ್ರೀಲಂಕಾದಲ್ಲಿ ಅವರ ಬೌಲಿಂಗ್ ನೋಡಿದ್ದೇವೆ. ಉತ್ತಮವಾಗಿ ನಿರ್ವಹಿಸಿದ್ದಾರೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಬೇಕಾದರೆ ನೀವು ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಬೇಕು. ಅಶ್ವಿನ್ ಅವರನ್ನು ಬದಿಗಿಟ್ಟು ಜಯಂತ್ ಯಾದವ್ ಅವರನ್ನು ತೆಗೆದುಕೊಳ್ಳಬೇಕು. ಅವರು 10 ಓವರ್ ಬೌಲ್ ಮಾಡಬಹುದು. ಅವರು ಬ್ಯಾಟಿಂಗ್ ಕೂಡ ಮಾಡುತ್ತಾರೆ ಎಂದು ಸಂಜಯ್ ಹೇಳಿದ್ದಾರೆ.