IND v SL Series : ಕಿಂಗ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದ ಶುಭ್ಮನ್ ಗಿಲ್
ಶ್ರೀಲಂಕಾ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್, ಆ ಮೂಲಕ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ದಾಖಲೆ ಬ್ರೇಕ್ ಮಾಡಿದ್ದಾರೆ.
ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶುಭ್ಮನ್ ಗಿಲ್, ಆ ಮೂಲಕ ತಂಡದ ಆಯ್ಕೆದಾರರ ನಂಬಿಕೆ ಉಳಿಸಿಕೊಂಡಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, 97 ಬಾಲ್‌ಗಳಲ್ಲಿ 14 ಬೌಂಡರಿ, 2 ಸಿಕ್ಸ್ ನೆರವಿನಿಂದ 116 ರನ್‌ಗಳಿಸಿ ಮಿಂಚಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 2ನೇ ಶತಕ ದಾಖಲಿಸಿದರು.
ಈ ಶತಕದೊಂದಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಭಾರತದ ಪರ ವಿರಾಟ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದ್ದಾರೆ. ಯುವ ಬ್ಯಾಟ್ಸ್‌ಮನ್ ODI ಕ್ರಿಕೆಟ್‌ನಲ್ಲಿ ಮೊದಲ 20 ಏಕದಿನ ಪಂದ್ಯಗಳಲ್ಲಿ ಭಾರತದ ಪರವಾಗಿ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಈವರೆಗೆ ಆಡಿರುವ 18 ಪಂದ್ಯಗಳಲ್ಲಿ 894 ರನ್‌ಗಳಿಸಿರುವ ಗಿಲ್, ಭಾರತದ ಪರ ಮೊದಲ ಸ್ಥಾನಕ್ಕೇರಿದ್ದಾರೆ.
ಮೊದಲ 20 ಏಕದಿನ ಪಂದ್ಯಗಳಲ್ಲಿ 847 ರನ್‌ಗಳಿಸಿರುವ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು 822 ರನ್‌ಗಳಿಸಿ 3ನೇ ಸ್ಥಾನ ಪಡೆದಿದ್ದರೆ. ಟೀಂ ಇಂಡಿಯಾದ ಮತ್ತೋರ್ವ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, 813 ರನ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 783 ರನ್‌ಗಳೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.








