ಕಾನ್ಪುರ: ಬಾಂಗ್ಲಾದೇಶ (Bangladesh) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ (Second Test)ನಲ್ಲಿ ಟಿ20 ಕ್ರಿಕೆಟ್‌ನಂತೆ (T20 Cricket) ಬ್ಯಾಟ್ ಬೀಸಿದ ಪರಿಣಾಮ ಭಾರತ (Team India) ತಂಡ ವಿಶ್ವದಾಖಲೆ ಬರೆದುಕೊಂಡಿದೆ.
ಈ ಪಂದ್ಯದಲ್ಲಿ ಭಾರತ ಒಟ್ಟು ಎರಡು ವಿಶ್ವ ದಾಖಲೆ (World Record) ರಚಿಸಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗದ 50 ರನ್ (19 ಎಸೆತ) ಮತ್ತು ಅತಿ ವೇಗದ 100 ರನ್ (61 ಎಸೆತ) ಭಾರತದ ಪಾಲಾಗಿದೆ. ಮೊದಲ 50 ರನ್ ಪೈಕಿ ಜೈಸ್ವಾಲ್ 30 ರನ್, ರೋಹಿತ್ ಶರ್ಮಾ 19 ರನ್ ಗಳಿಸಿದ್ದರು. ಅಲ್ಲದೇ, ಮತ್ತೆರಡು ರನ್ ಇತರೆ ಬಂದಿದ್ದವು.
ಇದಕ್ಕೂ ಮುನ್ನ ಇದೇ ವರ್ಷದ ಜುಲೈನಲ್ಲಿ ಇಂಗ್ಲೆಂಡ್ ತಂಡವು ವಿಂಡೀಸ್ ವಿರುದ್ಧ 26 ಎಸೆತಗಳಲ್ಲಿ 50 ರನ್ ಗಳಿಸಿತ್ತು. ಇನ್ನು ಅತೀ ವೇಗದ 100 ರನ್ ದಾಖಲೆ ಭಾರತದ ಹೆಸರಿನಲ್ಲಿತ್ತು. 2023 ರಲ್ಲಿ ವಿಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 74 ಎಸೆತಗಳಲ್ಲಿ 100 ರನ್ ಗಳಿಸಿತ್ತು. ಆದರೆ, ಈಗ ಎರಡೂ ದಾಖಲೆಗಳು ಭಾರತದ ಹೆಸರಿನಲ್ಲಿವೆ.
ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ ಅಟ್ಟಿದ್ದರು. ರೋಹಿತ್ ಶರ್ಮಾ ತಾವು ಎದುರಿಸಿದ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ರೋಹಿತ್ ಶರ್ಮಾ 23 ರನ್(11 ಎಸೆತ, 1 ಬೌಂಡರಿ, 3 ಸಿಕ್ಸ್), ಯಶಸ್ವಿ ಜೈಸ್ವಾಲ್ 72 ರನ್ ( 21 ಎಸೆತ, 12 ಬೌಂಡರಿ, 2 ಸಿಕ್ಸರ್) , ಶುಭಮನ್ ಗಿಲ್ 39 ರನ್ (36 ಎಸೆತ, 4 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ 9 ರನ್ ಗಳಿಸಿದರು. ಕೊಹ್ಲಿ 47 ಹಾಗೂ ಕೆ.ಎಲ್. ರಾಹುಲ್ 68 ರನ್ ಗಳಿಸಿದರು. ಪರಿಣಾಮ ಭಾರತ ತಂಡ 9 ವಿಕೆಟ್ ಕಳೆದುಕೊಂಡು 285 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ತಂಡ 2 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿದೆ.