ಭಾರತ-ಚೀನಾ ಘರ್ಷಣೆ – ತೈವಾನ್ ನಲ್ಲಿ ವೈರಲ್ ಆಗಿದೆ ಶ್ರೀರಾಮ ಡ್ರ್ಯಾಗನ್ ನನ್ನು ಬೇಟೆಯಾಡುವ ಚಿತ್ರ
ಹೊಸದಿಲ್ಲಿ, ಜೂನ್ 18: ಗಡಿಯಲ್ಲಿ ಕಿರಿಕ್ ತೆಗೆದು ಭಾರತದ ತಂಟೆಗೆ ಬಂದ ಚೀನಾ ಸೇನೆಗೆ ಭಾರತ ಸೇನೆ ಸರಿಯಾದ ಪಾಠ ಕಳಿಸಿದೆ. ಜೂನ್ 15 ಸೋಮವಾರ ಭಾರತೀಯ ಸೈನ್ಯ ಮತ್ತು ಚೀನಾದ ಸೇನೆ ನಡುವೆ ಘರ್ಷಣೆ ಜೋರಾಗಿ ನಡೆದಿದ್ದು, ಭಾರತೀಯ ಸೇನೆ ಚೀನಾದ ಸುಮಾರು 40ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದೆ. ಇದೀಗ ತೈವಾನ್ ಹಾಗೂ ಹಾಕಾಂಗ್ನಲ್ಲಿ ಚೀನಾದ ವಿರುದ್ಧ ಚರ್ಚೆಗಳು ನಡೆಯುತ್ತಿದ್ದು, ತೈವಾನ್ ದ್ವೀಪದ ಸೋಷಿಯಲ್ ಮೀಡಿಯಾದಲ್ಲಿ ಚೀನಾ ಸೈನಿಕರ ಹತ್ಯೆಯ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತೈವಾನ್ ದ್ವೀಪದ ಪ್ರಮುಖ ಪತ್ರಿಕೆ ತೈವಾನ್ ನ್ಯೂಸ್ ನಲ್ಲಿ ವರದಿಯೊಂದು ಪ್ರಕಟವಾಗಿದ್ದು, ಭಾರತೀಯರು ಭಕ್ತಿಯಿಂದ ಪೂಜಿಸುವ ಶ್ರೀರಾಮಚಂದ್ರ ಡ್ರ್ಯಾಗನ್ ನನ್ನು ಬಾಣದ ಮೂಲಕ ಬೇಟೆಯಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿಸಿದೆ. ಮಾತ್ರವಲ್ಲ ಈ ಫೋಟೋ ತೈವಾನ್ ನಲ್ಲಿ ಬಿಸಿಬಿಸಿ ಚರ್ಚೆಗೆ ಮತ್ತು ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಎಂದು ವರದಿ ಮಾಡಿದೆ.
ತೈವಾನ್ ದೇಶದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಭಗವಾನ್ ಶ್ರೀ ರಾಮಚಂದ್ರ ಬಾಣವನ್ನು ಹಿಡಿದು ಡ್ರ್ಯಾಗನ್ ಗೆ ಬಾಣ ಬಿಡುವಂತೆ ಚಿತ್ರೀಕರಿಸಲಾಗಿದ್ದು, ‘We conquer. we kill’ ಎಂದು ಬರೆಯಲಾಗಿದೆ. ಈ ಫೋಟೋ ಟ್ವಿಟರ್, ಫೇಸ್ ಬುಕ್ ಸೇರಿದಂತೆ ತೈವಾನ್ ನ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಂಗ್ ಕಾಂಗ್ ನ ಟ್ವಿಟರ್ ಬಳಕೆದಾರರೊಬ್ಬರು ಟ್ವಿಟರ್ ನಲ್ಲಿ ವೈರಲ್ ಆಗಿರುವ ಫೋಟೋಗೆ ಚೀನಾದ ಗಡಿಯಲ್ಲಿ ಭಾರತೀಯ ಮಿತ್ರರು ಈಗಾಗಲೇ ಯುದ್ಧ ಮಾಡುತ್ತಿದ್ದಾರೆ ಎಂದು ರೀಟ್ವೀಟ್ ಮಾಡಿದ್ದು, ಆ ರೀಟ್ವೀಟ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ ಎಂದು ತೈವಾನ್ ನ ನ್ಯೂಸ್ ವರದಿಯಲ್ಲಿ ತಿಳಿಸಿದೆ.
ಚೀನಾದ ಪಕ್ಕದಲ್ಲೇ ಇರುವ ತೈವಾನ್ ದ್ವೀಪದಲ್ಲಿ ಸ್ವ ಆಡಳಿತವಿದ್ದರೂ ಚೀನಾ ತೈವಾನ್ ತನ್ನ ಭೂಪ್ರದೇಶ ಎಂದು ಸಾಧಿಸಲು ನೋಡುತ್ತಿದೆ. ತೈವಾನ್ ತನ್ನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಎಂದೇ ಪರಿಗಣಿಸುವ ಚೀನಾ ತೈವಾನ್ ದ್ವೀಪವನ್ನು ಸದಾ ನಿಯಂತ್ರಿಸಲು ನೋಡುತ್ತಿದೆ. ಇದನ್ನು ತೈವಾನ್ ಬಲವಾಗಿ ವಿರೋಧಿಸುತ್ತಾ ಬಂದಿದೆ.