ನವದೆಹಲಿ : ಭಾರತವು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಚಂದ್ರನ ದಕ್ಷಿಣ ಧ್ರುವದ (Moon South Pole) ಮೇಲೆ ಹೆಜ್ಜೆ ಇಟ್ಟ ಮೊದಲ ದೇಶ ಭಾರತವಾಗಿದೆ.
ಇಲ್ಲಿ ಒರಟು, ಶೀತ (ತಾಪಮಾನವು ಮೈನಸ್ 230 ಡಿಗ್ರಿ ಸೆಂಟಿಗ್ರೇಡ್ಗೆ ಇಳಿಯಬಹುದು) ಹಾಗೂ ಕಗ್ಗತ್ತಲು ಭೂಪ್ರದೇಶದ ಮೇಲೆ ಚಂದ್ರಯಾನ-3 ರ (Chandrayaan-3) ಲ್ಯಾಂಡರ್ ಮಾಡ್ಯೂಲ್ ಶಸ್ವಿಯಾಗಿ ಇಳಿಸುವ ಮೂಲಕ ಭಾರತ ಐತಿಹಾಸಿಕ ಸಾಧನೆಗೈದಿದೆ.
ರಷ್ಯಾದ ಲೂನಾ-25 (Luna-25) ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದರೆ, ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಎಂಬ ಖ್ಯಾತಿ ಗಳಿಸುತ್ತಿತ್ತು. ಆದರೆ, ಅದು ವಿಫಲವಾಯಿತು. ಹೀಗಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದು ಭಾರತ ಸಾಧನೆ ಮಾಡಿದೆ.
ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಅಷ್ಟು ಸುಲಭವಲ್ಲ. ನೌಕೆಯನ್ನು ಯಶಸ್ವಿಯಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ನಾಲ್ಕು ದೇಶಗಳ ಸಾಲಿಗೆ ಭಾರತವೂ ಸೇರಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ.