ದೇಸ್ ವಾಸಿಯೋ ಹೊಡೀರಿ ಚಪ್ಪಾಳೆ : ಸೋಂಕಿತರ ಸಂಖ್ಯೆಯಲ್ಲಿ ಭಾರತಕ್ಕೆ 2ನೇ ಸ್ಥಾನ, ಎಲೆಕ್ಷನ್ ಗುಂಗಲ್ಲಿದೆ ಸರ್ಕಾರ
ಬೆಂಗಳೂರು : ಪ್ಯಾರೆ ದೇಸ್ ವಾಸಿಯೋ ಹೊಡೀರಿ ಚಪ್ಪಾಳೆ, ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನಕ್ಕೇರಿದೆ ಭಾರತ. ಹೌದು..! ದೇಶದಲ್ಲಿ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸಿದೆ. ಕಳೆದ ವರ್ಷ ಕಾಣಿಸಿಕೊಂಡ ಕೊರೊನಾಗಿಂತಲೂ ಕೊರೊನಾ 2.0 ರಾಕೆಟ್ ವೇಗದಲ್ಲಿ ಜನರ ದೇಹ ಹೊಕ್ಕುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 1,68,912 ಕೇಸ್ ಗಳು ಪತ್ತೆಯಾಗಿದೆ. ಇದು ಅತಂಕಕ್ಕೆ ಕಾರಣವಾಗಿದೆ. ಅಲ್ಲದೇ ನಿನ್ನೆ ಇಷ್ಟೊಂದು ಕೇಸ್ ಗಳು ಪತ್ತೆಯಾದ ಕಾರಣ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.
ಭಾರತದಲ್ಲಿ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆಯು 1.35 ಕೋಟಿ ತಲುಪಿದ್ದು, ಬ್ರೆಜಿಲ್ನ 1.34 ಕೋಟಿಯ ದಾಖಲೆಯನ್ನು ಹಿಂದಿಕ್ಕಿದೆ.
ಎಲೆಕ್ಷನ್ ಗುಂಗಲ್ಲಿದೆ ಸರ್ಕಾರ
ಹೌದು..! ದೇಶದಲ್ಲಿ ಕೊರೊನಾ ಎರಡನೇ ಅಲೆ ಜನರ ಬದುಕನ್ನ ಕಿತ್ತುಕೊಳ್ಳುವ ಎಲ್ಲಾ ಲಕ್ಷಣಗಳಿವೆ. ಕೊರೊನಾ ರಣಕೇಕೆಗೆ ಜನರ ಭಯಭೀತರಾಗಿದ್ದಾರೆ. ದಿನಂಪ್ರತಿ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿರುವುದು ಯಾಕೆ..? ಅನ್ನೋ ಪ್ರಶ್ನೆಯ ಜೊತೆ ಜೊತೆಗೆ ಮತ್ತೊಮ್ಮೆ ಲಾಕ್ ಡೌನ್ ವಿಧಿಸಿದ್ರೆ ಮಾಡೋದೇನು..? ಅಂತ ಯೋಚಿಸುತ್ತಾ ದೇಶದ ಜನರು ತಲೆಮೇಲೆ ಕೈ ಹಿಟ್ಟುಕೊಂಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಎಲೆಕ್ಷನ್ ಗುಂಗಲ್ಲಿ ಭರ್ಜರಿ ರೋಡ್ ಶೋ, ಬೃಹತ್ ಸಭೆ ಸಮಾರಂಭಗಳನ್ನ ನಡೆಸುತ್ತಾ ಸಾಗಿದೆ. ಅದು ಯಾವಮಟ್ಟಿಗೆ ಇದೆ ಅಂದ್ರೆ ಇವರ ಪ್ರಚಾರದ ಭರಾಟೆಗೆ ಕೊರೊನಾವೇ ಹೆದರಿ ದಿಕ್ಕಾಪಾಲಾಗಬೇಕು ಅನ್ನೋ ರೀತಿಯಲ್ಲಿ ಅಬ್ಬರಿಸಿ ಬೊಬ್ಬರಿದು ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳಿಗೆ ಜವಾಬ್ದಾರಿ ಇಲ್ಲವೇ..?
ಸದ್ಯ ದೇಶದ ಪ್ರಜ್ಞಾವಂತ ಜನರಲ್ಲಿ ಕಾಡುತ್ತಿರೋ ಪ್ರಶ್ನೆ ಇದು. ಯಾಕೆಂದ್ರೆ ಸಮಾಜದ ಒಲಿತಿಗಾಗಿಯೇ ಅಧಿಕಾರಿ ಹಿಡಿಯಬೇಕು ಅನ್ನೋ ರಾಜಕೀಯ ಪಕ್ಷಗಳು ಜನರನ್ನ ಬೀದಿಗೆ ತರುವ ಕೊರೊನಾ ಬಗ್ಗೆ ಯಾಕೆ ತಲೆಕಡೆಸಿಕೊಳ್ಳುತ್ತಿಲ್ಲ. ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದು ಗೊತ್ತಿದ್ದರೂ, ಅದರ ತೀವ್ರತೆ ಎಷ್ಟಿದೆ ಅನ್ನೊ ಅನುಭವ ಇದ್ದರೂ ಚುನಾವಣೆ ಪ್ರಚಾರ, ಬೃಹತ್ ರೋಡ್ ಶೋ, ಸಭೆ ಸಮಾರಂಭಗಳು ನಡೆಸುತ್ತಿರೋದು ಎಷ್ಟು ಸರಿ..? ಇವರಿಗೆ ಜವಾಬ್ದಾರಿ ಇಲ್ವಾ..? ಜನರೇ ಎಚ್ಚರದಿಂದಿರಿ… ಕಠಿಣ ಕ್ರಮ ತೆಗೆದುಕೊಳ್ಳುವುದು ಬಿಡೋದು ನಿಮ್ಮ ಕೈಯಲ್ಲಿದೆ. ನಿಮ್ಮ ಸಹಕಾರ ಮುಖ್ಯ ಅನ್ನೋ ಸರ್ಕಾರಗಳು ಎಷ್ಟರ ಮಟ್ಟಿಗೆ ಕೊರೊನಾವನ್ನ ಗಂಭೀರವಾಗಿ ತೆಗೆದುಕೊಂಡಿವೆ. ಎಲ್ಲವನ್ನು ಮುಕ್ತಗೊಳಿಸಿ ಜನರೇ ಮನೆಯಲ್ಲಿರೀ ಅಂದ್ರೆ ಅವರ ಹೊಟ್ಟೆ ತುಂಬೋದು ಹೇಗೆ..? ಎಲ್ಲವು ಜನರ ಕೈಯಲ್ಲಿದೆ ಅನ್ನೋದಾದ್ರೆ ಸರ್ಕಾರ ಯಾಕಿರಬೇಕು..? ಸಚಿವರು ಯಾಕೆಬೇಕು..?
ಒಟ್ಟಾರೆ ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಈಗಿನ ನಾಯಕರಿಗೆ ರಕ್ತಗತವಾಗಿದೆ. ‘ರಾ’ ಅಂದ್ರೆ ರಾಕ್ಷಸರಂತೆ ‘ಜ’ ಅಂದ್ರೆ ಜನರನ್ನ ‘ಕೀ’ ಅಂದ್ರೆ ಕಿತ್ತುತಿನ್ನೋ ‘ಯ’ ಅಂದ್ರೆ ಯಂತ್ರವಾಗಿದೆ ರಾಜಕೀಯ.










