ಬಲೂಚಿಸ್ತಾನದ ಖುಜ್ದಾರ್ ಎಂಬ ಪ್ರದೇಶದಲ್ಲಿ ಸಂಭವಿಸಿದ ಶಾಲಾ ಬಸ್ ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪ ಮಾಡಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
ಆದರೆ, ಭಾರತವು ಈ ಆರೋಪವನ್ನು ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡುತ್ತಾ, ಪಾಕಿಸ್ತಾನ ತನ್ನ ಆಂತರಿಕ ರಾಜಕೀಯ ಮತ್ತು ಭದ್ರತಾ ವಿಫಲತೆಗಳಿಂದ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯಲು ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಭಾರತವನ್ನು ಹೀನವಾಗಿ ತೋರಿಸಲು ಇದು ಪಾಕಿಸ್ತಾನದ ಕೇವಲ ರಾಜಕೀಯ ತಂತ್ರ ಮಾತ್ರ, ಎಂದು ಹೇಳಿದ್ದಾರೆ.
ಪಾಕಿಸ್ತಾನ ಇತ್ತೀಚೆಗೆ ಯುದ್ಧದ ಎಲ್ಲಾ ಮಟ್ಟಗಳಲ್ಲಿ ಸೋಲುಂಡ ನಂತರ, ತನ್ನ ದುರ್ಬಲತೆಯನ್ನು ಮುಚ್ಚಿಕೊಳ್ಳಲು ಮತ್ತು ಜಾಗತಿಕ ಮಾಧ್ಯಮದ ಗಮನ ಸೆಳೆಯಲು ಭಾರತ ವಿರುದ್ಧ ನಿರಂತರವಾಗಿ ಆರೋಪಿಸುತ್ತಿದೆ. ಬಲೂಚಿಸ್ತಾನದಲ್ಲಿ ಮುಂಬೈ ಶೈಲಿಯ ಬಾಂಬ್ ಸ್ಫೋಟದಂತಹ ಘಟನೆಯ ಬಳಿಕ ಈ ಆರೋಪ ಬಂದಿದ್ದು, ತಜ್ಞರು ಇದನ್ನು ಪಾಕಿಸ್ತಾನದ ಪ್ರಚಾರ ಯತ್ನವನ್ನಾಗಿ ಪರಿಗಣಿಸಿದ್ದಾರೆ.
ಈ ನಡುವೆ, ಭಾರತ ವಿಶ್ವ ಮಟ್ಟದಲ್ಲಿ ತನ್ನ ಪ್ರಭಾವವನ್ನೂ ಮತ್ತು ಭದ್ರತೆಯ ವೈಖರಿಯನ್ನೂ ಬೆಳೆಸಿಕೊಳ್ಳುತ್ತಿರುವಾಗ, ಪಾಕಿಸ್ತಾನ ಈ ರೀತಿಯ ಸುಳ್ಳು ಆರೋಪಗಳ ಮೂಲಕ ತನ್ನ ದುರ್ಬಲತೆಯನ್ನು ಮರೆಮಾಚಲು ನೋಡುತ್ತಿದೆ ಎಂಬ ಟೀಕೆಗಳು ರಾಜತಾಂತ್ರಿಕ ವಲಯದಿಂದ ಕೇಳಿಬರುತ್ತಿವೆ.








