ಕೊವಿಡ್-19 ಸಾಂಕ್ರಾಮಿಕ ರೋಗದ ಪ್ರತಿಕೂಲ ಸಮಯದಲ್ಲಿ ಭಾರತೀಯ ಕಂಪನಿಗಳು ವಿದೇಶಿ ಕಂಪೆನಿಗಳಿಂದ ಸ್ವಾಧೀನಕ್ಕೆ ಒಳಗಾಗದಂತೆ ಕೇಂದ್ರವು ಶನಿವಾರ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯನ್ನು ತಿದ್ದುಪಡಿ ಮಾಡಿದೆ.
ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ಕೇಂದ್ರವು ತಿದ್ದುಪಡಿ ಮಾಡಿದೆ. ತಿದ್ದುಪಡಿಯ ಪ್ರಕಾರ ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಭಾರತೀಯ ಕಂಪನಿಗಳಿಗೆ ಹೂಡಿಕೆ ಮಾಡಲು ಸರ್ಕಾರದ ಅನುಮೋದನೆ ಅಗತ್ಯವಿರುತ್ತದೆ ಎಂದು ಮೂಲಗಳು ವರದಿ ಮಾಡಿವೆ. ರಕ್ಷಣಾ, ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ವಿದೇಶಿ ಹೂಡಿಕೆಗಾಗಿ ನಿಷೇಧಿಸಲಾದ ಕ್ಷೇತ್ರಗಳು / ಚಟುವಟಿಕೆಗಳಲ್ಲಿ ಭಾರತೀಯ ವಲಯಗಳಲ್ಲಿ ಹೂಡಿಕೆ ಮಾಡುವುದನ್ನು ಪಾಕಿಸ್ತಾನಕ್ಕೆ ನಿಷೇಧಿಸಿದೆ. ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಭಾರತ, ಇಯು, ಯುಎಸ್, ಆಸ್ಟ್ರೇಲಿಯಾ ಚೀನಾದ ಎಫ್‌ಡಿಐ ಅನ್ನು ಪರಿಶೀಲಿಸಿದೆ.
ಏಪ್ರಿಲ್ 12 ರಂದು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಭಾರತದ ಅತಿದೊಡ್ಡ ವಸತಿ ಹಣಕಾಸು ಸಾಲಗಾರರಾದ ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ 1% ಪಾಲನ್ನು ಖರೀದಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾ ವೈರಸ್ ಭೀತಿ ಭಾರಿ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಮುಂದುವರಿದ ದೇಶಗಳಾದ ಅಮೆರಿಕ, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಬ್ರಿಟನ್ ಮತ್ತು ಕೊರಿಯಾಗಳು ಕೂಡ ಕೊರೊನಾ ವೈರಸ್ ನಿಂದ ತತ್ತರಿಸಿರುವುದು ಜಾಗತಿಕ ಆರ್ಥಿಕ ಹಿಂಜರಿತದ ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ. ವಿಶ್ವದಾದ್ಯಂತ 22,87,083 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 1,57,450 ಮಂದಿ ಸಾವನ್ನಪ್ಪಿದ್ದಾರೆ.
ವಿವಿಧ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಮತ್ತು ಉತ್ಪಾದನಾ ಕೇಂದ್ರವಾಗಿ ಅತಿದೊಡ್ಡ ಪೂರೈಕೆದಾರ ದೇಶವಾಗಿರುವ ಚೀನಾ ತನ್ನ ಗಡಿಗಳನ್ನು ಮುಚ್ಚಿರುವುದರಿಂದ ಪ್ರಮುಖ ಕೈಗಾರಿಕೆಗಳಾದ ಆಟೋಮೊಬೈಲ್ ಗಳು, ಲೋಹ ಮತ್ತು ಔಷಧೀಯ ವ್ಯಾಪಾರವು ಸ್ಥಗಿತಗೊಂಡಿದೆ. ಮೇ 3ರವರೆಗೆ ಭಾರತದಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿ ಇರುವುದರಿಂದ ಭಾರತದ ಅರ್ಥಿಕತೆಯೂ ಸ್ತಬ್ಧಗೊಂಡಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ವಿದೇಶಿ ಶಕ್ತಿಗಳು ಭಾರತದ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡದಂತೆ ಕೇಂದ್ರ ಸರ್ಕಾರ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯನ್ನು ತಿದ್ದುಪಡಿ ಮಾಡಿದೆ.
ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿರುವ ಪ್ರಕಟಣೆಯಂತೆ, ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶ ಸರ್ಕಾರದ ಅನುಮೋದನೆ ಪಡೆದ ನಂತರವಷ್ಟೇ ಹೂಡಿಕೆ ಮಾಡಬಹುದಾಗಿದೆ. ಆದರೂ, ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶ ಅಥವಾ ಭಾರತದಲ್ಲಿ ಹೂಡಿಕೆ ಮಾಡುವ ಯಾವುದೇ ದೇಶದ ಪ್ರಜೆಯು ಸರ್ಕಾರದ ಅನುಮೋದನೆ ಇದ್ದಲ್ಲಿ ಮಾತ್ರ ಹೂಡಿಕೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೊಸ ನಿಯಮಗಳು ಭಾರತದಲ್ಲಿ ಅಸ್ತಿತ್ವದಲ್ಲಿರುವ ಅಥವಾ ಮುಂದಿನ ದಿನಗಳಲ್ಲಿನ ಎಫ್‌ಡಿಐಗಳ ಮಾಲೀಕತ್ವವನ್ನು ನೇರವಾಗಿ ಅಥವಾ ಪರೋಕ್ಷವಾಗಿ ವರ್ಗಾಯಿಸಲು ಸಹ ಅನ್ವಯಿಸುತ್ತವೆ ಎಂದು ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ ತಿಳಿಸಿದೆ.








