ನವದೆಹಲಿ: ಪಾಕಿಸ್ತಾನಕ್ಕೆ ನೆರವು ನೀಡಿದ ಟರ್ಕಿ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಂಡಿದೆ. ಟರ್ಕಿ ವಿರುದ್ಧ ದೇಶದೊಳಗೆ ಬಾಯ್ ಕಟ್ ಟರ್ಕಿ ಅಭಿಯಾನ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ, ಕೇಂದ್ರ ಸರ್ಕಾರ ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ರದ್ದುಪಡಿಸುವ ಆದೇಶ ಹೊರಡಿಸಿದೆ.
ಈ ನಿರ್ಧಾರವನ್ನು ರಾಷ್ಟ್ರೀಯ ಭದ್ರತೆ ಮತ್ತು ದೇಶದ ಆಂತರಿಕ ಹಿತದೃಷ್ಟಿಯಿಂದ ಕೈಗೊಂಡಿದ್ದು, ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಲಾದ ವಿಮಾನಯಾನ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ರದ್ದುಪಡಿಸಿದೆ.
ಈ ಕ್ರಮವು ಟರ್ಕಿಯೊಂದಿಗೆ ಭಾರತದ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಟರ್ಕಿಯು ಪಾಕಿಸ್ತಾನಕ್ಕೆ ನೀಡಿದ ಪ್ರೋತ್ಸಾಹ ಮತ್ತು ಸಹಾಯದ ಹಿನ್ನೆಲೆಯಲ್ಲಿ ಭಾರತ ತೀವ್ರವಾಗಿ ನಿಂದನೆ ವ್ಯಕ್ತಪಡಿಸುವ ಮೂಲಕ, ತನ್ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಪೈಲಟ್ ಗಳು ಮತ್ತು ವಿಮಾನಯಾನ ತಜ್ಞರು ಈ ನಿರ್ಧಾರವನ್ನು ದೇಶದ ಭದ್ರತೆಯ ಪರಿಗಣನೆಯಾಗಿ ಉತ್ತಮ ನಿರ್ಧಾರವೆಂದು ವರ್ಣಿಸಿದ್ದಾರೆ.







