ಕರುಣೆ ಇಲ್ಲದ ಯಂಗ್ ಇಂಡಿಯಾಗೆ ಲಂಕಾ ಎರಡನೇ ಸವಾಲು..! ಸರಣಿ ಗೆಲ್ಲುವ ತವಕದಲ್ಲಿ ದ್ರಾವಿಡ್ ಬಾಯ್ಸ್…!
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಇಂದು (ಜುಲೈ 20ರಂದು) ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡು ಸರಣಿ ಗೆಲ್ಲುವ ತವಕದಲ್ಲಿದೆ. ಇನ್ನೊಂದೆಡೆ ಹೀನಾಯವಾಗಿ ಸೋತಿರುವ ಲಂಕಾ ತಂಡ ಕೂಡ ಗೆಲುವನ್ನು ಎದುರು ನೋಡುತ್ತಿದೆ. ತವರಿನಲ್ಲಿ ಆಗುವಂತಹ ಮುಖಭಂಗವನ್ನು ತಪ್ಪಿಸಲು ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.
ಇನ್ನು ಟೀಮ್ ಇಂಡಿಯಾದಲ್ಲಿ ಎರಡನೇ ಪಂದ್ಯಕ್ಕೆ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಒಂದು ವೇಳೆ ಬದಲಾವಣೆಯಾದ್ರೂ ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆಯ ಜಾಗಕ್ಕೆ ರುತುರಾಜ್ ಗಾಯಕ್ವಾಡ್ ಅಥವಾ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನುಳಿಂದಂತೆ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಅನಿವಾರ್ಯತೆಯೂ ಇಲ್ಲ. ಆರಂಭಿಕ ಪೃಥ್ವಿ ಶಾ ಬ್ಯಾಟಿಂಗ್ ಲಯ ಅತ್ಯುತ್ತಮ ಮಟ್ಟದಲ್ಲಿದೆ. ಚೊಚ್ಚಲ ಏಕದಿನ ಪಂದ್ಯವನ್ನಾಡಿರುವ ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್ ಅವಕಾಶಗಳನ್ನು ಎರಡೂ ಕೈಯಿಂದ ಬಾಚಿಕೊಳ್ಳುತ್ತಿದ್ದಾರೆ. ನಾಯಕ ಶಿಖರ್ ಧವನ್ ಯುವ ಆಟಗಾರರ ಆಟವನ್ನು ನೋಡುತ್ತಾ ಜವಾಬ್ದಾರಿಯುತವಾಗಿ ಆಡುತ್ತಿದ್ದಾರೆ.
ಹಾಗೇ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ರೂ ಲಂಕಾ ತಂಡಕ್ಕೆ ಅಪಾಯಕಾರಿ ಬೌಲರ್. ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ ಬೌಲಿಂಗ್ ನಲ್ಲಿ ಲಯ ಕಂಡುಕೊಂಡಿರುವುದು ಟೀಮ್ ಇಂಡಿಯಾಗೆ ಪ್ಲಾಸ್ ಪಾಯಿಂಟ್ ಆಗಲಿದೆ.
ಇನ್ನೊಂದೆಡೆ ಲಂಕಾ ತಂಡದ ಅಂತಿಮ 11ರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಹಾಗೇ ಶ್ರೀಲಂಕಾ ತಂಡದ ಬ್ಯಾಟ್ಸ್ ಮೆನ್ ಗಳು ಬ್ಯಾಟಿಂಗ್ ಲಯಕಂಡುಕೊಂಡಿದ್ರೂ ಕೂಡ ಅನುಭವದ ಕೊರತೆ ಕಾಡುತ್ತಿದೆ. ಉತ್ತಮ ಆರಂಭ ಪಡೆದ್ರೂ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಹುಡುಗರ ಆಕ್ರಮಣಕಾರಿ ಪ್ರವೃತ್ತಿಯೇ ಲಂಕಾ ಬೌಲರ್ ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋದನ್ನು ಕಾದು ನೋಡೋಣ.
ಟೀಮ್ ಇಂಡಿಯಾ ಸಂಭವನೀಯ 11ರ ಬಳಗ
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್.
ಶ್ರೀಲಂಕಾ ಸಂಭವನೀಯ 11ರ ಬಳಗ
ಅವಿಷ್ಕಾ ಫರ್ನಾಂಡೊ, ಬಿನೋದ್ ಭಾನುಕಾ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಷ, ಧನಂಜಯ ಡಿಸಿಲ್ವಾ, ಚರಿತ್ ಆಸ್ಲಾಂಕಾ, ದಾಸುನ್ ಶಾನಾಕ (ನಾಯಕ), ವಾನಿಂದು ಹಸರಂಗ, ಚಾಮಿಕಾ ಕರುಣರತ್ನೆ, ಇಸುರು ಉಡಾನ, ದುಶ್ಮಂತ ಚಾಮಿರಾ, ಲಕ್ಷನ್ ಸಂಡಕನ್.