ಚೆನ್ನೈ : ವಿಶ್ವಕಪ್ ಪಂದ್ಯಾವಳಿಯ ತಾನಾಡಿದ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ (Virat kohli) ಮತ್ತು ಕೆ.ಎಲ್ ರಾಹುಲ್ (KL Rahul) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಿಂದಾಗಿ ಭಾರತ ದಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿದೆ.
ಆಸೀಸ್ ನೀಡಿದ 200 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಶೂನ್ಯ ಸುತ್ತಿ ಮೂವರು ಬ್ಯಾಟ್ಸಮನ್ ಗಳು ಫೆವಲಿಯನ್ ಸೇರಿದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟದ ಪರಿಣಾಮ ಭಾರತ ತಂಡವು 41.2 ಓವರ್ನಲ್ಲೇ 4 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಭಾರತ 2ನೇ ಓವರ್ನಲ್ಲೇ ಕೇವಲ 2 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಪಡಬಾರದ ಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ಭಾರತ ತಂಡ ಕೂಡ ಆಸ್ಟ್ರೇಲಿಯಾದಂತೆ ಭಾರತವು ವಿಕೆಟ್ ಪರೇಡ್ ನಡೆಸಲಿದೆ ಅನಿಸಿತ್ತು. ಭಾರತೀಯರು ನಿರಾಶೆ ಅನುಭವಿಸುತ್ತಿದ್ದರು. ಆದರೆ, ಇದಕ್ಕೆಲ್ಲ ರಾಹುಲ್ ಹಾಗೂ ಕೊಹ್ಲಿ ತೀಲಾಂಜಲಿ ಹಾಡಿದರು. ಈ ಜೋಡಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಪರಿಣಾಮ 15 ಓವರ್ ಪೂರ್ಣಗೊಂಡರೂ ಭಾರತ 49 ರನ್ ಗಳಿಸಿದ್ದರಿಂದ ಗೆಲವು ಅಸಾಧ್ಯ ಅನಿಸಿತ್ತು. ನಂತರ ಸಮಯೋಚಿತ ಬ್ಯಾಟಿಂಗ್ ನಿಂದ ಒಂದೊಂದೇ ಬೌಂಡರಿಗಳು ಹೋಗಲಾರಂಭಿಸಿದವು. ನಂತರ ರನ್ ಕೂಡ ಏರುತ್ತ ಸಾಗಿತು.
ಇಬ್ಬರ ಜೊತೆಯಾಟದಿಂದ ಭಾರತ 35 ಓವರ್ಗಳಲ್ಲಿ 151 ರನ್ ಗಳಿಸಿತ್ತು. 4ನೇ ವಿಕೆಟ್ಗೆ ಕೆ.ಎಲ್ ರಾಹುಲ್ ಹಾಗೂ ಕೊಹ್ಲಿ 215 ಎಸೆತಗಳಲ್ಲಿ 165 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 85 ರನ್ ಸಿಡಿಸಿ ಶತಕ ವಂಚಿತರಾದರೆ, ಕೊನೆಯವರೆಗೂ ಹೋರಾಡಿದ ಕೆ.ಎಲ್ ರಾಹುಲ್ 115 ಎಸೆತಗಳಲ್ಲಿ 97 ರನ್ (8 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಹಾರ್ದಿಕ್ ಪಾಂಡ್ಯ 11 ರನ್ ಕೊಡುಗೆ ನೀಡಿದರು. ಆಸ್ಟ್ರೇಲಿಯಾ ಪರ ಹ್ಯಾಜಲ್ವುಡ್ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 1 ವಿಕೆಟ್ ಗಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ 49.3 ಓವರ್ಗಳಲ್ಲಿ 199ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತ್ತು.