ಬೆಂಗಳೂರು: ದೇಶದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡುವ ಸಲುವಾಗಿ ಖಾಸಗಿ ಉದ್ಯಮಗಳು ದೇಶದಲ್ಲಿ ಸ್ವತಂತ್ರವಾಗಿ ಬಾಹ್ಯಾಕಾಶ ಚಟುವಟಿಕೆಗಳಾದ ರಾಕೆಟ್ ಹಾಗೂ ಉಪಗ್ರಹ ನಿರ್ಮಾಣ, ಉಡಾವಣೆ ನಡೆಸಲು ಅವಕಾಶ ನೀಡುವ ಮಹತ್ವದ ಸುಧಾರಣಾ ನೀತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
ರಾಕೆಟ್ ನಿರ್ಮಾಣ, ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಳಂತಹ ಕಾರ್ಯಗಳನ್ನೂ ಖಾಸಗಿಯವರೂ ಇನ್ನು ಮುಂದೆ ಕೈಗೊಳ್ಳಬಹುದಾಗಿದ್ದು, ಇದಕ್ಕೆ ಅಗತ್ಯ ನೆರವು, ತಂತ್ರಜ್ಞಾನವನ್ನು ಇಸ್ರೊ ಸಹಕಾರ ನೀಡಲಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ತಿಳಿಸಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಉದ್ಯಮಗಳ ಆರಂಭಕ್ಕೆ ಅನುಮತಿ ನೀಡಿತ್ತು.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಲು ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಟುವಟಿಕೆಗಳನ್ನು ನಡೆಸುವುದರಿಂದ ಬಾಹ್ಯಾಕಾಶ ವಿಜ್ಞಾನ ಮೂಲದ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಶಿವನ್ ಹೇಳಿದ್ದಾರೆ.
ಭಾರತದಲ್ಲಿ ಇಲ್ಲಿಯವರೆಗೆ ಖಾಸಗಿ ಉದ್ಯಮಗಳು ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೋಗೆ ಬೇಕಾದ ಬಿಡಿ ಭಾಗಗಳನ್ನು ತಯಾರಿಸುವುದಷ್ಟಕ್ಕೇ ಸೀಮಿತವಾಗಿದ್ದರು. ಇನ್ನು ಮುಂದೆ ಬಾಹ್ಯಾಕಾಶ ಸಂಸ್ಥೆಗೆ ಸಮಾನವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇದರಿಂದ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಸ ಯುಗವೇ ಸೃಷ್ಟಿಯಾಗಲಿದೆ ಶಿವನ್ ಬಣ್ಣಿಸಿದ್ದಾರೆ.
ಖಾಸಗಿ ಕಂಪನಿಗಳು ಏನೆಲ್ಲ ಮಾಡಬಹುದು..!
ರಾಕೆಟ್ ನಿರ್ಮಾಣ, ರಾಕೆಟ್ ಉಡ್ಡಯನ, ಉಪಗ್ರಹ ಮತ್ತು ಅದರ ಪೇಲೋಡ್ ನಿರ್ಮಾಣದಿಂದ ಮೊದಲ್ಗೊಂಡು ಹಲವು ಚಟುವಟಿಕೆಗಳು ಮತ್ತು ಸೇವೆಗಳನ್ನು ನೀಡಬಹುದು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ಖಾಸಗಿ ಉದ್ಯಮಗಳು ತೊಡಗಿಕೊಳ್ಳಬಹುದು. ಇದರಿಂದ ದೇಶದಲ್ಲಿ ಉದ್ಯಮ ಬೆಳೆಯುವುದರ ಜೊತೆಗೆ ಅಪಾರ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಶಿವನ್ ತಿಳಿಸಿದ್ದಾರೆ.
ಖಾಸಗಿ ಕ್ಷೇತ್ರದ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಮತ್ತು ಸ್ಟಾರ್ಟ್ ಅಪ್‌ಗಳು ಭಾಗವಹಿಸಬಹುದು. ಇವರ ಚಟುವಟಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆಯನ್ನು ಇಸ್ರೋ ನೋಡಿಕೊಳ್ಳಲಿದೆ ಎಂದು ಹೇಳಿದರು.