ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಗೆದ್ದು ಬೀಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಗೆಲುವಿನ ಮೂಲಕ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿವೆ.
ಭಾರತ ತಂಡವು 106 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 396 ರನ್ ಗಳಿಸಿತ್ತು. ಈ ವೇಳೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದಾಖಲೆಯ ದ್ವಿಶತಕ ಸಿಡಿಸಿದ್ದರು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡವು 253 ರನ್ ಗಳಿಸಿತ್ತು.
ಈ ಮೂಲಕ 143 ರನ್ ಗಳ ಮುನ್ನಡೆಯೊಂದಿಗೆ ಭಾರತ ತಂಡ ಆಟ ಆರಂಭಸಿತ್ತು. ಆದರೆ, ಗಿಲ್ ಬಿಟ್ಟು ಬೇರೆ ಯಾವ ಆಟಗಾರರು ಪ್ರತಿರೋಧ ಒಡ್ಡದ ಹಿನ್ನೆಲೆಯಲ್ಲಿ ಭಾರತ ತಂಡವು 255 ರನ್ ಮಾತ್ರ ಗಳಿಸಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 399 ರನ್ಗಳ ಗೆಲುವಿನ ಗುರಿ ನೀಡಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 4ನೇ ದಿನದಾಟದಲ್ಲಿ 292 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 106 ರನ್ ಗಳ ಸೋಲು ಕಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ 6 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.