ಪ್ಯಾರಿಸ್: ಪ್ಯಾರಾಲಿಂಪಿಕ್ಸ್ ನಲ್ಲಿ (Paris Paralympics 2024) ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದು, ಈ ಬಾರಿ ಸರ್ವಕಾಲಿಕ ಪದಕ ಗೆದ್ದ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಬಾರತ ಇದೆ.
ಚಿನ್ನದ ಪದಕದ ಬೇಟೆಯೊಂದಿಗೆ ತನ್ನ ಅಭಿಯಾನ ಆರಂಭಿಸಿದ್ದ ಭಾರತೀಯ ಆಟಗಾರರು ಸರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಭಾರತೀಯ ಆಟಗಾರರು ಮಂಗಳವಾರ (ಆ.3) ಒಂದೇ ದಿನ 5 ಪದಕ ಗೆದ್ದಿದ್ದು, ಪ್ಯಾರಾಲಿಂಪಿಕ್ಸ್ ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಭಾರತ ಪದಕ ಪಟ್ಟಿ 20ಕ್ಕೆ ಏರಿಕೆಯಾಗಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದು ಸಾಗುತ್ತಿದೆ.
ಮಂಗಳವಾರ ಭಾರತಕ್ಕೆ ಅಥ್ಲೆಟಿಕ್ಸ್ನ (Indian Athletes) ಜಾವಲಿನ್ ಎಸೆತದಲ್ಲಿ 2, ಹೈ ಜಂಪ್ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಗೆದ್ದಿದೆ. ಭಾರತದ ಬುಟ್ಟಿಯಲ್ಲಿ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಇವೆ. ಟೋಕಿಯೋದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಇನ್ನೂ 4 ದಿನ ಬಾಕಿ ಇದ್ದು, ಮತ್ತಷ್ಟು ಪದಕ ಗೆಲ್ಲುವ ವಿಶ್ವಾಸದಲ್ಲಿ ಭಾರತ ಇದೆ.
ಮರಿಯಪ್ಪನ್ ತಂಗವೇಲು ಭಾರತದ ಪರ ಪ್ಯಾರಾಲಿಂಪಿಕ್ಸ್ ನಲ್ಲಿ 3 ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ಜಾವಲಿನ್ ನಲ್ಲಿ ದೇವೇಂದ್ರ ಝಝಾರಿಯಾ 2 ಚಿನ್ನ, 1 ಬೆಳ್ಳಿ, ಶೂಟಿಂಗ್ ನಲ್ಲಿ ಅವನಿ ಲೇಖರಾ 2 ಚಿನ್ನ, ಕಂಚು ಗೆದ್ದಿದ್ದಾರೆ. ತಂಗವೇಲು 2016ರ ರಿಯೋ ಕ್ರೀಡಾಕೂಟದಲ್ಲಿ ಚಿನ್ನ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಮಂಗಳವಾರ ರಾತ್ರಿ ನಡೆದ ಮಹಿಳೆಯರ 400 ಮೀಟರ್ ಟಿ20 ವಿಭಾಗದಲ್ಲಿ ದೀಪ್ತಿ ಜೀವಾಂಗಿ 55.82 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.