ಕಾನ್ಪುರ: ಮಳೆಯಿಂದಾಗಿ (Rain) ಮೂರು ದಿನ ರದ್ದಾಗಿ, ನಾಲ್ಕನೇ ದಿನಕ್ಕೆ ಆರಂಭವಾಗಿದ್ದ ಪಂದ್ಯವನ್ನು ಕೊನೆಗೂ ಭಾರತ ಗೆದ್ದು ಬೀಗಿದೆ.
ಬಾಂಗ್ಲಾ (Bangladesh) ವಿರುದ್ಧದ ಎರಡನೇ ಟೆಸ್ಟ್ (Second Test) ಪಂದ್ಯವನ್ನು ಭಾರತ ಆಕ್ರಮಣಕಾರಿ ಪ್ರದರ್ಶನದ ಮೂಲಕ 7 ವಿಕೆಟ್ ಗಳಿಂದ ಗೆದ್ದಿದೆ. ಗೆಲ್ಲಲು 95 ರನ್‌ಗಳ ಸುಲಭ ಸವಾಲು ಬೆನ್ನಟ್ಟಿದ ಭಾರತ 17.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸುವ ಮೂಲಕ ಸಾಧಿಸಿದೆ. ಈ ಮೂಲಕ ಭಾರತ ತಂಡ ಸರಣಿಯನ್ನು ಕ್ವೀನ್ ಸ್ವೀಪ್ ಮಾಡಿಕೊಂಡಿದೆ.
ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 51 ರನ್ (45 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದರೆ ವಿರಾಟ್ ಕೊಹ್ಲಿ ಔಟಾಗದೇ 29 ರನ್ (37 ಎಸೆತ, 4 ಬೌಂಡರಿ) ಗಳಿಸಿ ತಂಡವನ್ನು ಗುರಿ ತಲುಪುವಂತೆ ಮಾಡಿದರು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ 47 ಓವರ್ ಗಳಲ್ಲಿ 146 ರನ್ ಗಳಿಗೆ ಆಲೌಟ್ ಆಗಿತ್ತು.
ಮೊದಲ ದಿನ ಕೇವಲ 35 ಓವರ್ ಗಳಿಗೆ ಮಳೆಯಿಂದಾಗಿ ಪಂದ್ಯ ಮುಗಿದಿತ್ತು 2 ಮತ್ತು 3ನೇ ದಿನ ಒಂದು ಎಸೆತ ಹಾಕಲು ಸಾಧ್ಯವಾಗಿರಲಿಲ್ಲ. 4 ದಿನ ಭಾರತ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿತ್ತು. ಪರಿಣಾಮ ವೇಗದ 50, 100, 200, 250 ರನ್ ಹೊಡೆದ ತಂಡ ಎಂಬ ವಿಶ್ವದಾಖಲೆಯನ್ನು ಭಾರತ ಬರೆದಿದೆ.
ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಜನವರಿ 2016ರ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ತಂಡ ಭಾರತ ಎಂಬ ಸಾಧನೆಯನ್ನು ಕೂಡ ಮಾಡಿತು. ಭಾರತ 86 ಪಂದ್ಯವಾಡಿ 53 ಪಂದ್ಯ ಗೆದ್ದುಕೊಂಡಿದೆ. 21 ಪಂದ್ಯವನ್ನು ಸೋತರೆ 12 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ 111 ಪಂದ್ಯವಾಡಿ 52 ಪಂದ್ಯ ಗೆದ್ದಿದೆ. 44 ಪಂದ್ಯವನ್ನು ಸೋತು 15 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 233/10, ಭಾರತ ಮೊದಲ ಇನ್ನಿಂಗ್ಸ್ 285/9, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 146/10, ಭಾರತ ಎರಡನೇ ಇನ್ನಿಂಗ್ಸ್ 98/3