ಶಿಖರ್ ಧವನ್ ಹೆಸರಿಗೆ ಸೇರಿಕೊಂಡಿವೆ ಈ ಮೂರು ವಿಶೇಷ ದಾಖಲೆಗಳು…!
ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದೆ. ನಾಯಕನ ಜವಾಬ್ದಾರಿಗೆ ತಕ್ಕಂತೆ ಧವನ್ ಬ್ಯಾಟಿಂಗ್ ನಡೆಸಿದ್ರು. ಇನ್ನೊಂದೆಡೆ, ಪೃಥ್ವಿ ಶಾ ಮತ್ತು ಇಶಾನ್ ಕಿಶಾನ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.
ಈ ನಡುವೆ ಶಿಖರ್ ಧವನ್ ತನ್ನ ನಾಯಕತ್ವದ ಮೊದಲ ಪಂದ್ಯದಲ್ಲೇ ಮೂರು ದಾಖಲೆಗಳಿಗೆ ಪಾತ್ರರಾಗಿದ್ದಾರೆ.
ಹಾಗಿದ್ರೆ ಮೊದಲ ದಾಖಲೆ ಏನು ಗೊತ್ತಾ.. ಮೊದಲನೆಯದ್ದು, ಟೀಮ್ ಇಂಡಿಯಾ ಪರ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಅತೀ ಹಿರಿಯ ಆಟಗಾರನಾಗಿ ಶಿಖರ್ ಧವನ್ ಹೊರಹೊಮ್ಮಿದ್ದಾರೆ. ಧವನ್ ತನ್ನ 35ನೇ ಹರೆಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ರು. ಈ ಹಿಂದೆ 1984ರಲ್ಲಿ ಮೊಹಿಂದರ್ ಅಮರನಾಥ್ ಅವರು ತನ್ನ 34ರ ಹರೆಯದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಬಳಿಕ ಸೈಯ್ಯದ್ ಕೀರ್ಮಾನಿ ಮತ್ತು ಅಜೀತ್ ವಾಡೇಕರ್ ಅವರು ತಮ್ಮ 33ರ ಹರೆಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.
ಇನ್ನು ಎರಡನೇ ದಾಖಲೆ ಏನು ಅಂದ್ರೆ, ಶಿಖರ್ ಧವನ್ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 86 ರನ್ ಗಳಿಸಿದ್ದರು. ಅಲ್ಲದೆ ತಂಡವನ್ನು ಗೆಲುವಿನ ದಡವನ್ನು ಕೂಡ ಸೇರಿಸಿದ್ದರು. ಈ ನಡುವೆ ಶಿಖರ್ ಧವನ್ ಅವರು 17 ರನ್ ಗಳಿಸಿದ್ದಾಗ ಶ್ರೀಲಂಕಾ ಪರ ಒಂದು ಸಾವಿರ ರನ್ ದಾಖಲಿಸಿದ್ದ ಹಿರಿಮೆಗೂ ಪಾತ್ರರಾದ್ರು. ಲಂಕಾ ವಿರುದ್ಧ 17ನೇ ಪಂದ್ಯದಲ್ಲಿ ಧವನ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ನಾಲ್ಕು ಶತಕ ಹಾಗೂ ಐದು ಶತಕಗಳನ್ನು ದಾಖಲಿಸಿದ್ದಾರೆ. ಭಾರತದ ಪರ ಲಂಕಾ ವಿರುದ್ಧ ಒಂದು ಸಾವಿರಕ್ಕಿಂತ ಅಧಿಕ ರನ್ ದಾಖಲಿಸಿದ್ದ 12ನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇನ್ನು ಮೂರನೇ ದಾಖಲೆ ಏನು ಅಂದ್ರೆ, ಏಕದಿನ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ್ದ ಭಾರತದ ಹತ್ತನೇ ಆಟಗಾರನಾಗಿದ್ದಾರೆ ಶಿಖರ್ ಧವನ್. ಮೊದಲ ಏಕದಿನ ಪಂದ್ಯದಲ್ಲಿ ಧವನ್ 23 ರನ್ ಗಳಿಸಿದ್ದಾಗ ಈ ಸಾಧಕರ ಸಾಲಿಗೆ ಸೇರಿಕೊಂಡಿದ್ದಾರೆ. ಧವನ್ 143 ಏಕದಿನ ಪಂದ್ಯಗಳಲ್ಲಿ 6063 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 17 ಶತಕ ಹಾಗೂ 33 ಅರ್ಧಶತಕಗಳಿವೆ.
ಇದಕ್ಕು ಮೊದಲು ಭಾರತರ ಪರ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹಮ್ಮದ್ ಅಜರುದ್ದೀನ್, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಂತರ ಶಿಖರ್ ಧವನ್ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಈ ಮೂರು ದಾಖಲೆಗಳನ್ನು ಬರೆದಿದ್ದಾರೆ.