ವೆಸ್ಟಿಂಡೀಸ್ ವಿರುದ್ಧ ಭಾರತದ 100ನೇ ಟೆಸ್ಟ್ ಇಂದಿನಿಂದ ಆರಂಭವಾಗಲಿದೆ. ಇದು ಈ ಸರಣಿಯ ಎರಡನೇ ಪಂದ್ಯವೂ ಹೌದು. ಮೊದಲ ಪಂದ್ಯ ಗೆದ್ದಿರುವ ಭಾರತವು ಈ ಪಂದ್ಯವನ್ನೂ ಗೆದ್ದು ಸರಣಿ ಗೆಲ್ಲುವ ಯೋಜನೆಯಲ್ಲಿದೆ.
ಭಾರತೀಯ ತಂಡದಲ್ಲಿ ದೊಡ್ಡ ಬದಲಾವಣೆ ಕಂಡುಬರುವ ಸಾಧ್ಯಯತೆಯಿಲ್ಲ. ಮೊದಲ ಟೆಸ್ಟ್ ಗೆದ್ದ ತಂಡವೇ ಕಣಕ್ಕಿಳಿಯುವ ಸಾಧ್ಯತೆ ಅಡಕವಾಗಿದೆ. ಆದರೆ ಜಯದೇವ ಉನಾಡ್ಕಟ್ ಮೊದಲ ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರದಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಅಕ್ಸರ್ ಪಟೇಲ್ ಅಥವಾ ಮುಖೇಶ್ ಕುಮಾರ್ ಬರುವ ಸಾಧ್ಯತೆಗಳೂ ಇವೆ. ಬಿಸಿಲಿನ ವಾತಾವರಣವಿದ್ದರೆ ಸ್ಪಿನ್ನರ್ ಅಕ್ಸರ್ಗೆ ಸ್ಥಾನ ಸಿಗಬಹುದು. ಮೋಡ ಮುಸುಕಿದ ವಾತಾವರಣವಿದ್ದರೆ ವೇಗಿ ಮುಖೇಶ್ ಕುಮಾರ್ ಸ್ಥಾನ ಪಡೆಯಬಹುದು. ಉನಾಡ್ಕಟ್ ಮೊದಲ ಟೆಸ್ಟಿನಲ್ಲಿ ಕೇವಲ 9 ಓವರುಗಳನ್ನಷ್ಟೇ ಎಸೆದಿದ್ದರು.
ಮೊದಲ ಟೆಸ್ಟ್ ಆಡಿದ ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ತಮ್ಮ ನಿರ್ವಹಣೆಯಿಂದ ಗಮನ ಸೆಳೆದಿದ್ದು ಅವರು ಇಂದಿನ ಪಂದ್ಯದಲ್ಲೂ ಸ್ಥಾನ ಪಡೆಯುವುದು ನಿಶ್ಚಿತವಾಗಿದೆ. ಜೈಸ್ವಾಲ್ 171 ಬಾರಿಸಿದ್ದರು. ಇಶಾನ್ಗೆ ಬ್ಯಾಟಿಂಗಿನಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲವಾದರೂ ವಿಕೆಟಿನ ಹಿಂದೆ ಅವರ ಕೀಪಿಂಗ್ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿದೆ. ಜೈಸ್ವಾಲ್ ಆರಂಭಿಕನಾಗಿ ತಮ್ಮ ಸ್ಥಾನ ಗಟ್ಟಿಗೊಳಿಸಿರುವುದರಿಂದ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲೆ ಮುಂದುವರಿಯಲಿದ್ದಾರೆ.
ಭಾರತದ ವೇಗಿಗಳ ವಿಭಾಗವು ತುಸು ದುರ್ಬಲವಾಗಿದೆ. ಪ್ರಮುಖ ಆಟಗಾರರಿಲ್ಲದೆ ಸೊರಗಿದೆ. ಆದರೆ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ಸ್ಪಿನ್ನಿಂದ ವಿಂಡೀಸನ್ನು ಸೋಲಿಸಲು ನೆರವಾಗಿದ್ದರು. ಇಂದಿನ ಟೆಸ್ಟ್ ನಡೆಯುವ ಪಿಚ್ ವೇಗಿಗಳಿಗೆ ಅನುಕೂಲಕರವಾಗಿದ್ದರೆ ವೇಗದ ಬೌಲರುಗಳು ಹೆಚ್ಚಿನ ಶ್ರಮ ಹಾಕಬೇಕಾಗಿದೆ.
ಪೋರ್ಟ್ ಆಫ್ ಸ್ಪೇನ್ನ ಈ ಮೈದಾನದಲ್ಲಿ ಈ ಹಿಂದೆ 13 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ 3 ಟೆಸ್ಟ್ ಗೆದ್ದಿವೆ. 7 ಪಂದ್ಯಗಳು ಡ್ರಾ ಗೊಂಡಿವೆ.
ಇತ್ತೀಚಿನ ವರ್ಷಗಳಲ್ಲಿ ಪತನದ ಹಾದಿಯಲ್ಲಿರುವ ವೆಸ್ಟಿಂಡೀಸ್ ಕ್ರಿಕೆಟ್ ಚೇತರಿಕೆ ಕಾಣಲು ಹೆಣಗುತ್ತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಸೋತಿರುವ ಅದು ಈ ಟೆಸ್ಟ್ನಲ್ಲಾದರೂ ಹೋರಾಟ ನೀಡುವ ಉದ್ದೇಶ ಹೊಂದಿದೆ. ದೇಶೀ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವ ಆಲ್ರೌಂಡರ್ ಸಿಂಕ್ಲೇರ್ ಅವರನ್ನು ವಿಂಡೀಸ್ ಸೇರಿಸಿಕೊಂಡಿದೆ. ವಿಂಡೀಸಿನ ವೇಗದ ದಾಳಿಯು ಮೊದಲಿನಷ್ಟು ಮಾರಕವಾಗಿಲ್ಲದಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಅದರ ಜತೆಗೇ ಭಾರತದ ಸ್ಪಿನ್ ದಾಳಿ ನಿರ್ಧರಿಸಲು ಬ್ಯಾಟರ್ಗಳು ಕಷ್ಟಪಡುತ್ತಿದ್ದಾರೆ.