ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದಿರುವ ಭಾರತ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದು, ಐತಿಹಾಸಿಕ ದಾಖಲೆ ಬರೆದಿದೆ.
ನಾಲ್ಕನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆಲ್ಲುವುದರ ಮೂಲಕ ತವರಿನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಭಾರತ ತಂಟಕ್ಕೆ ಇದು 17ನೇ ಟೆಸ್ಟ್ ಸರಣಿ ಗೆಲುವಾಗಿದೆ. ಈ ಗೆಲುವಿನ ಮೂಲಕ ತವರಿನಲ್ಲಿ ಅಜೇಯವಾಗಿ ಉಳಿದಿರುವ ಭಾರತ, ಅತಿ ಹೆಚ್ಚು ಸರಣಿಗಳನ್ನು ಗೆದ್ದ ತಂಡಗಳ ಪೈಕಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ.
ಕಾಂಗರೂಗಳು 1993ರಿಂದ 2008 ರವರೆಗೆ ತವರಿನಲ್ಲಿ ಒಟ್ಟು 28 ಟೆಸ್ಟ್ ಸರಣಿಗಳನ್ನು ಆಡಿದ್ದು, ಎಲ್ಲ ಸರಣಿಗಳಲ್ಲಿ ಗೆಲುವು ಸಾಧಿಸಿದ್ದರು. ಇದು ಇಲ್ಲಿಯವರೆಗಿನ ದಾಖಲೆಯಾಗಿದೆ. ಎರಡನೇ ಸ್ಥಾನದಲ್ಲಿದ್ದ ಪಾಕಿಸ್ತಾನ 1982 ರಿಂದ 1994 ರವರೆಗೆ ತನ್ನ ತವರಿನಲ್ಲಿ ಸರಣಿ ಸೋಲದ ದಾಖಲೆ ಕಂಡಿತ್ತು. 2013 ರಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋಲದ ಭಾರತ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ವೆಸ್ಟ್ ಇಂಡೀಸ್ ತಂಡ ಕೂಡ ತವರಿನಲ್ಲಿ 16 ಸರಣಿಯಲ್ಲಿ ಸೋಲದ ದಾಖಲೆ ನಿರ್ಮಿಸಿತ್ತು. ಸದ್ಯ ಭಾರತ ತಂಡವು 17ನೇ ಗೆಲುವು ಸಾಧಿಸಿ ಪಾಕ್ ಹಾಗೂ ವೆಸ್ಟ್ ಇಂಡೀಸ್ ದಾಖಲೆ ಮುರಿದಿದೆ. ಈ ಹಿಂದೆ ಕೂಡ ಭಾರತ ತಂಡವು ಎರಡು ಬಾರಿ ಸತತವಾಗಿ 14 ಸರಣಿಯಲ್ಲಿ ಗೆಲುವು ಸಾಧಿಸಿತ್ತು.