ಈ ಸೋಲಿಗೆ ಕ್ಷಮೆಯೇ ಇಲ್ಲ.. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವಿರಾಟ್ ಪಡೆಯ ಕೆಟ್ಟ ಇನಿಂಗ್ಸ್…!
ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಬಳಗ ಅಪ್ರತಿಮ ತಂಡ. ಟೆಸ್ಟ್ ಆಗಿರಲಿ, ಏಕದಿನವಿರಲಿ, ಟಿ-ಟ್ವೆಂಟಿ ಇರಲಿ.. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಅದ್ಭುತವಾದ ಸಾಧನೆಯನ್ನೇ ಮಾಡಿದೆ. ಅದರಲ್ಲಿ ಎರಡು ಮಾತಿಲ್ಲ.
ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಆಡಿಲೇಡ್ ಟೆಸ್ಟ್ ಪಂದ್ಯದ ಸೋಲಿಗೆ ಕ್ಷಮೆಯೇ ಇಲ್ಲ. ಇಷ್ಟೊಂದು ಹೀನಾಯವಾಗಿ ಸೋಲುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅಷ್ಟೇ ಯಾಕೆ ಆಸ್ಟ್ರೇಲಿಯ ತಂಡ ಕೂಡ ಕೊಹ್ಲಿ ಪಡೆ ಈ ರೀತಿ ತಲೆಬಾಗುತ್ತಾರೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಕ್ಕಿಲ್ಲ.
ಹಾಗೇ ನೋಡಿದ್ರೆ, ಮೊದಲ ಟೆಸ್ಟ್ ಪಂದ್ಯದ ಎರಡು ದಿನ ಕೂಡ ಟೀಮ್ ಇಂಡಿಯಾವೇ ಪ್ರಾಬಲ್ಯ ಸಾಧಿಸಿತ್ತು. ಆದ್ರೆ ಮೂರನೇ ದಿನ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳಿಗೆ ಕ್ರೀಸ್ ನಲ್ಲಿ ನಿಲ್ಲಲು ಆಸಿಸ್ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ.
ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳನ್ನು ಆಸೀಸ್ ಬೌಲರ್ ಕಾಡಿದ ಪರಿಯಂತೂ ಅದ್ಭುತವಾಗಿತ್ತು. ಆಸೀಸ್ ಬೌಲರ್ ಗಳ ಲೆಕ್ಕಚಾರ, ತಂತ್ರಗಳ ಮುಂದೆ ವಿರಾಟ್ ಪಡೆ ಸ್ತಬ್ದವಾಗಿತ್ತು. ಹೀಗಾಗಿ ಕೇವಲ 36 ರನ್ ಗಳಿಗೆ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ಅನ್ನು ಮುಗಿಸಿತ್ತು. ಆದ್ರೆ ಆಲೌಟ್ ಆಗಿಲ್ಲ ಎಂಬುದು ಸಮಾಧಾನ ಕಾರಣ ಮಹಮ್ಮದ ಶಮಿ ಗಾಯಗೊಂಡು ಕ್ರೀಸ್ ನಿಂದ ಹೊರನಡೆದಿದ್ದರು.
ಪಂದ್ಯ ಅಂದ ಮೇಲೆ ಸೋಲು -ಗೆಲುವು ಇದ್ದೇ ಇರುತ್ತೆ. ಆದ್ರೆ ಈ ರೀತಿ ಮಾತ್ರ ಸೋಲಬಾರದು. ಇಷ್ಟೊಂದು ಕೆಟ್ಟದಾಗಿ ಭಾರತ ಕ್ರಿಕೆಟ್ ತಂಡ ಯಾವತ್ತೂ ಆಡಿರಲಿಲ್ಲ. ಟೆಸ್ಟ್ ಕ್ರಿಕೆಟ್ ನ ಆರಂಭದ ದಿನಗಳಲ್ಲಿ ಅಂದ್ರೆ 1974ರಲ್ಲಿ ಇಂಗ್ಲೆಂಡ್ ವಿರುದ್ದ ಭಾರತ 42 ರನ್ ಗಳಿಗೆ ಆಲೌಟ್ ಆಗಿತ್ತು. ಆದ್ರೆ ವಿಶ್ವದ ಅಗ್ರಮಾನ್ಯ ತಂಡವಾಗಿರುವ ಟೀಮ್ ಇಂಡಿಯಾ 36 ರನ್ ಗಳಿಸಿ ಈ ರೀತಿ ಸೋಲು ಅನುಭವಿಸಿರುವುದಕ್ಕೆ ಯಾವುದೇ ಕ್ಷಮೆಯೇ ಇಲ್ಲ.
ಹಾಗಂತ ಟೀಮ್ ಇಂಡಿಯಾ ಆಟಗಾರರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿಲ್ಲ. ಆದ್ರೆ ಆಡಿದ ರೀತಿಯನ್ನು ನೋಡಿದಾಗ ಬೇಸರವಾಗುತ್ತದೆ. ಅಚ್ಚರಿಯೂ ಆಗುತ್ತಿದೆ.
ಹಾಗಾದ್ರೆ ಈ ಸೋಲಿಗೆ ಪ್ರಮುಖ ಕಾರಣ ಏನು ? ಉತ್ತರಗಳು ಹೀಗಿರುತ್ತವೆ. ಆಸಿಸ್ ಬೌಲರ್ ಗಳು ಅದ್ಭುತವಾಗಿ ಬೌಲಿಂಗ್ ಮಾಡಿದ್ರು. ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳು ಕೆಟ್ಟದಾಗಿ ಆಡಿದ್ರು. ಹೀಗೆ ಸುಲಭವಾಗಿ ಹೇಳಬಹುದು. ಆದ್ರೆ ಕಾರಣ ಅದಲ್ಲ. ಮುಖ್ಯವಾಗಿ ಟೀಮ್ ಇಂಡಿಯಾ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ಕೊಟ್ಟಿತ್ತು. ಇನ್ನೊಂದೆಡೆ ಆಸಿಸ್ ಬೌಲರ್‍ಗಳು ಮಾರಕವಾಗಿ ದಾಳಿ ನಡೆಸಿದ್ರೂ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳು ತಾಳ್ಮೆಯಿಂದ ಆಡಲಿಲ್ಲ. ಟೆಸ್ಟ್ ಕ್ರಿಕೆಟ್ ಅನ್ನೋದನ್ನು ಮರೆತು ಹೋದವರಂತೆ ಬ್ಯಾಟ್ ಬೀಸಿದ್ರು.
ಹಾಗೇ ನೋಡಿದ್ರೆ, ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದಂಗೆ ಅಲ್ಲ, ಇಲ್ಲಿ ತಾಳ್ಮೆ ಇರಬೇಕು. ಎದುರಾಳಿ ತಂಡದ ತಂತ್ರಗಳನ್ನು ಅರಿತುಕೊಳ್ಳಬೇಕು. ಸಂಯಮ, ಏಕಾಗ್ರತೆ ಮತ್ತು ಬದ್ದತೆಯಿಂದ ಆಡಬೇಕು. ಕ್ರೀಸ್ ನಲ್ಲಿ ಹೆಚ್ಚು ಸಮಯ ಉಳಿದುಕೊಳ್ಳುವಂತಹ ಸಾಮಥ್ರ್ಯ ವೂ ಇರಬೇಕು. ಎಷ್ಟೇ ಪ್ರತಿಭೆ, ಸಾಮಥ್ರ್ಯವಿದ್ರೂ, ಎದುರಾಳಿ ಬೌಲರ್ ಗಳನ್ನು ಕಾಡುತ್ತಾ ರನ್ ಪೇರಿಸಬೇಕು. ಆಗ ಮಾತ್ರ ಯಸಸ್ಸು ಸಾಧಿಸಲು ಸಾಧ್ಯವಾಗುತ್ತೆ.
ಆದ್ರೆ ಆಡಿಲೇಡ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಆಡಲಿಲ್ಲ. ಪೃಥ್ವಿ ಶಾ ವೀಕ್ ನೆಸ್ ಏನು ಎಂಬುದು ಆಸೀಸ್ ಬೌಲರ್ ಗಳಿಗೂ ಗೊತ್ತು. ಮಯಾಂಕ್ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಮೊರೆ ಹೋದ್ರು. ಚೇತೇಶ್ವರ್ ಪೂಜಾರ, ರಹಾನೆ ಮತ್ತು ಹನುಮ ವಿಹಾರಿ ಗಲಿಬಿಲಿ ಮಾಡಿಕೊಂಡು ವಿಕೆಟ್ ಕೈಚೆಲ್ಲಿದ್ರು. ನಾಯಕ ವಿರಾಟ್ ಆರ್ಭಟ ಕೂಡ ನಡೆಯಲಿಲ್ಲ. ಹೀಗಾಗಿ ಆಸಿಸ್ ಬೌಲರ್ ಗಳ ಲಯಬದ್ದವಾದ ದಾಳಿಗೆ ಟೀಮ್ ಇಂಡಿಯಾ ಹೀನಾಯವಾಗಿ ಸೋತಿತ್ತು.