ವಿಶ್ವದ ಅತಿ ಎತ್ತರದ ಯುದ್ಧಭೂಮಿ ಇದು..!!
ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಭಾರತೀಯ ಸೈನಿಕರು ಕಾರ್ಯ ನಿರ್ವಹಿಸುತ್ತಾರೆ. ಜಮ್ಮುಕಾಶ್ಮೀರದ ಸಿಯಾಚಿನ್ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಹವಾಮಾನ ಅದೆಷ್ಟು ಪ್ರತಿಕೂಲವಾಗಿರುತ್ತದೆ ಎಂಬುದನ್ನು ನೀವು ಊಹಿಸಲೂ ಅಸಾಧ್ಯ. ಬಾಲ್ಟೀ ಭಾಷೆಯಲ್ಲಿ “ಸಿಯಾ” ಎಂದರೆ ಗುಲಾಬಿ ಜಾತಿಗೆ ಸೇರಿದ ಒಂದು ನಮೂನೆಯ ಹೂ ಎಂದು ಹಾಗು “ಚನ್” ಎಂದರೆ “ಹೇರಳವಾಗಿ ಕಾಣಸಿಗುವ ” ಎಂಬರ್ಥವಿದೆ. ಸಿಯಾಚಿನ್ ನೀರ್ಗಲ್ಲಿನ ಪ್ರದೇಶದಲ್ಲಿ ಯಾವುದೆ ರೀತಿಯ ಗಿಡಮರಗಳು ಬೆಳೆಯುವುದಿಲ್ಲ. ಆದರೆ ಸಿಯಾಚಿನ್ ಕೆಳಭಾಗದಲ್ಲಿ ಕಾಣಸಿಗುವ ಒಂದು ನಮೂನೆಯ ಗುಲಾಬಿ ಹೂವಿನಿಂದ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಇಡೀ ಸಿಯಾಚಿನ್ ಪ್ರದೇಶದ ಒಡೆತನದ ಕುರಿತಂತೆ ಭಾರತ ಹಾಗು ಪಾಕಿಸ್ತಾನದ ನಡುವೆ ವಿವಾದವಿದೆ. ಎರಡೂ ರಾಷ್ಟ್ರಗಳು ಈ ಪ್ರದೇಶ ತಮಗೆ ಸೇರಿದ್ದೆಂದು ವಾದಿಸುತ್ತವೆ.
೧೯೮೪ ರಲ್ಲಿ ಭಾರತ “ಆಪರೇಷನ್ ಮೇಘದೂತ್” ಎಂಬ ಸೇನಾ ಕಾರ್ಯಾಚರಣೆ ನಡೆಸಿ ಸಿಯಾಚಿನ್ ನೀರ್ಗಲ್ಲು ಹಾಗು ಅದರ ಉಪನದಿಗಳ ಮೇಲೆ ಹತೋಟಿ ಪಡೆಯಿತು.ಸಿಯಾಚಿನ್ ನಲ್ಲಿ ೧೯೮೪ ರಿಂದ ೧೯೯೯ ರ ವರೆಗೂ ಭಾರತ ಹಾಗು ಪಾಕಿಸ್ತಾನ ಸೇನೆಯ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಪಾಕಿಸ್ತಾನ ‘ಆಪರೇಷನ್ ಅಬ್ದಿಲ್’ ನ ಮೂಲಕ ಸಿಯಾಚಿನ್ ಅನ್ನು ಪಡೆಯಲು ಯೋಚಿಸಿತ್ತು.ಆದರೆ ಭಾರತ ‘ಆಪರೇಷನ್ ಮೇಘದೂತ್’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನಕ್ಕಿಂತ ಒಂದು ದಿನ ಮೊದಲೇ ಸಿಯಾಚಿನ್ ಹಾಗು ಅದರ ಪಶ್ಚಿಮಕ್ಕಿರುವ ಸಲ್ಟಾರೋ ಗುಡ್ಡಸಾಲಿನ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಿತು.
ಇನ್ನು ಈ ಪ್ರದೇಶದಲ್ಲಿ ಸೇನೆಯವರನ್ನು ಹೊರತುಪಡಿಸಿ ಬೇರೆ ಇನ್ಯಾವ ನಾಗರಿಕ ವಸತಿ ಇಲ್ಲ.ಭಾರತದ ಬೇಸ್ ಕ್ಯಾಂಪಿನಿಂದ ೧೦ ಮೈಲಿ ಕೆಳಗೆ ವಾರ್ಷಿ ಎಂಬ ಹಳ್ಳಿಯೇ ಕೊನೆಯ ಜನವಸತಿ ಇರುವ ಸ್ಥಳ.ಸಿಯಾಚಿನ್ ನಿರ್ಜನ ಪ್ರದೇಶವಾಗಿದ್ದು ರಸ್ತೆ ಸಂಪರ್ಕವೂ ವಿರಳವಾಗಿದೆ.ಭಾರತದ ಬದಿಯಿಂದ ಸಿಯಾಚಿನ್ ನೀರ್ಗಲ್ಲಿನ ಶಿಖರದಿಂದ ೭೨ ಕಿಲೋಮೀಟರ್ ದೂರದಲ್ಲಿನ ಜಿಂಗ್ರುಲ್ಮಾ ದಲ್ಲಿರುವ ಮಿಲಿಟರಿ ಬೇಸ್ ಕ್ಯಾಂಪಿನಲ್ಲಿ ರಸ್ತೆ ಸಂಪರ್ಕ ಕೊನೆಗೊಳ್ಳುತ್ತದೆ.
ಪ್ರತಿಕೂಲ ಹವಾಮಾನವಿರುವ ಈ ಪ್ರದೇಶದ ಕೆಲವು ಪೋಸ್ಟ್ ಗಳಿಂದ ಸೇನೆಯನ್ನು ಹಿಂಪಡೆಯಲು ಭಾರತ ಈ ಹಿಂದೆ ಯೋಚಿಸಿತ್ತು. ಆದರೆ ಕಾರ್ಗಿಲ್ ಯುದ್ಧದ ನಂತರ ಈ ಯೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತ ಸಧ್ಯದ ಗಡಿ ರೇಖೆಯನ್ನು ಪಾಕಿಸ್ತಾನ ಒಪ್ಪಿಕೊಳ್ಳುವ ವರೆಗು ತಾನು ಸಿಯಾಚಿನ್‍ನಿಂದ ಸೇನೆಯನ್ನು ಹಿಂಪಡೆಯಲಾಗದು ಎಂದು ಸ್ಪಷ್ಟವಾಗಿ ತಿಳಿಸಿದೆ.
ಇನ್ನು ಈ ಪ್ರದೇಶದಲ್ಲಿಕಾರ್ಯ ನಿರ್ವಹಿಸುವ ಸೈನಿಕರು ಧರಿಸುವ ಸಮವಸ್ತ್ರಗಳನ್ನು ವಿಶಿಷ್ಠ ರೀತಿಯಲ್ಲಿ ತಯಾರಿಸುತ್ತಾರೆ. ಇಸ್ರೋ, ಈ ಸಮವಸ್ತ್ರದ ಪದರಗಳ ನಡುವೆ ಬಿಸಿಯನ್ನು ಹಿಡಿದಿಡುವ ವಿಶಿಷ್ಠ ಜೆಲ್ ಉಪಯೋಗಿಸುವ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಸೈನಿಕರ ಸ್ಥಾನವನ್ನು ಸೂಚಿಸುವ ಕೆಲವು ಉಪಕರಣಗಳ ಬಗ್ಗೆ ಸಹ ಸಂಶೋಧನೆ ನಡೆಯುತ್ತಿದೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ ಪಡೆಗಳಿಂದ ದೇಶ ರಕ್ಷಿಸಲು ಭಾರತೀಯ ಯೋಧರು ಅಕ್ಷರಶಃ ನರಕಯಾತನೆ ಅನುಭವಿಸ್ತಾರೆ.