ಐಪಿಎಲ್ 2020 – ಇಶಾಂತ್ ಶರ್ಮಾಗೆ ಗಾಯದ ಬರೆ.. ಡೆಲ್ಲಿ ಕ್ಯಾಪಿಟಲ್ಸ್ ನಿಂದ ಔಟ್
2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಆಘಾತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಗಾಯದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
32ರ ಹರೆಯದ ಇಶಾಂತ್ ಶರ್ಮಾ ಅವರು ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದಾರೆ. ಅಕ್ಟೋಬರ್ 7ರಂದು ಇಶಾಂತ್ ಶರ್ಮಾ ಬೌಲಿಂಗ್ ಅಭ್ಯಾಸ ನಡೆಸುವಾಗ ನೋವು ಕಾಣಿಸಿಕೊಂಡಿದೆ.
ಇಶಾಂತ್ ಶರ್ಮಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಿರುವ ಇಶಾಂತ್ ಶರ್ಮಾ ಅವರು, ನಾಲ್ಕು ಓವರ್ ಗಳಲ್ಲಿ 26 ರನ್ ನೀಡಿದ್ದಾರೆ. ಆದ್ರೆ ವಿಕೆಟ್ ಪಡೆದುಕೊಂಡಿಲ್ಲ.
ಇಶಾಂತ್ ಶರ್ಮಾ ಅವರು ಇಲ್ಲಿಯವರೆಗೆ 97 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 80 ಏಕದಿನ ಪಂದ್ಯ ಹಾಗೂ 14 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಮುಗಿದ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದೀಗ ಇಶಾಂತ್ ಶರ್ಮಾ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಲಭ್ಯರಾಗುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ಗಾಯದ ಬರೆ. ಈ ಮೊದಲು ಅಮಿತ್ ಮಿಶ್ರಾ ಕೈ ಬೆರಳಿನ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.