ಐಪಿಎಲ್ 2020- ಸನ್ ರೈಸರ್ಸ್ ಭವಿಷ್ಯ ಬರೆಯಲಿರುವ ಮುಂಬೈ ಇಂಡಿಯನ್ಸ್..!
2020ರ ಐಪಿಎಲ್ ಟೂರ್ನಿ ಲೀಗ್ ಹಂತದ ಕೊನೆಯ ಪಂದ್ಯ (ನವೆಂಬರ್ 3) ಇಂದು ನಡೆಯಲಿದೆ.
ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಭವಿಷ್ಯವನ್ನು ಮುಂಬೈ ಇಂಡಿಯನ್ಸ್ ನಿರ್ಧರ ಮಾಡಲಿದೆ.
ಈಗಾಗಲೇ ಮುಂಬೈ ಇಂಡಿಯನ್ಸ್ ಆಡಿರುವ 13 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಟ್ಟು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಇತ್ತ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸದ್ಯ 13 ಪಂದ್ಯಗಳನ್ನು ಆಡಿರುವ ಸನ್ ರೈಸರ್ಸ್ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದ್ರೆ ಉತ್ತಮ ರನ್ ಧಾರಣೆಯನ್ನು ಹೊಂದಿದೆ.
ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವನ್ನು ದಾಖಲಿಸಿದ್ರೆ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಪ್ಲೇ ಆಫ್ ಗೆ ಎಂಟ್ರಿಯಾಗುವ ಅವಕಾಶಗಳು ಜಾಸ್ತಿ ಇದೆ.
ಈ ನಿಟ್ಟಿನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಹಾಗಂತ ಡೇವಿಡ್ ವಾರ್ನರ್ ಬಳಗಕ್ಕೆ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ.
ಯಾಕಂದ್ರೆ ಡೇವಿಡ್ ವಾರ್ನರ್ ಬಳಗಕ್ಕೆ ಮುಂಬೈ ತಂಡದ ಸವಾಲುಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ.
ಮುಖ್ಯವಾಗಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ. ಬೂಮ್ರಾ, ಬೌಲ್ಟ್ ಹಾಗೂ ನಥಾನ್ ಕಲ್ಟರ್ ನೇಲ್ ನ ನಿಖರವಾದ ವೇಗ, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್ ಸ್ಪಿನ್ ಮೋಡಿ ಹೀಗೆ ಸನ್ ರೈಸರ್ಸ್ ತಂಡ ರನ್ ಗಳಿಸಲು ಪರದಾಟ ನಡೆಸಬೇಕಾಗುತ್ತದೆ.
ಇನ್ನು ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿರಾನ್ ಪೊಲಾರ್ಡ್ ಹಂಗಾಮಿ ನಾಯಕನಾಗಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನೆಡೆಸುತ್ತಿದ್ದಾರೆ.
ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಬ್ಯಾಟಿಂಗ್ ಬಲ ಮುಂಬೈ ತಂಡಕ್ಕಿದೆ.
ಆದ್ರೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಡೇವಿಡ್ ವಾರ್ನರ್ ಅವರನ್ನು ಹೆಚ್ಚು ಅವಲಂಬಿತವಾಗಿದೆ. ವೃದ್ದಿಮಾನ್ ಸಾಹ, ಮನೀಷ್ ಪಾಂಡೆ, ಜಾನಿ ಬೇರ್ ಸ್ಟೋವ್ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದ್ರೆ ಅಷ್ಟೊಂದು ಚಿಂತೆ ಏನು ಇಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ನಟರಾಜನ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ ಹಾಗೂ ರಶೀದ್ ಖಾನ್ ಜಾದು ವರ್ಕ್ ಔಟ್ ಆದ್ರೆ ಮುಂಬೈ ಇಂಡಿಯನ್ಸ್ ತಂಡವನ್ನು ಕಟ್ಟಿ ಹಾಕಬಹುದು.
ಈ ನಡುವೆ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ ಸಾಧ್ಯತೆಗಳು ಕೂಡ ಇವೆ.
ಮುಂಬೈ ಇಂಡಿಯನ್ಸ್ ಸಂಭವನೀಯ ತಂಡ
ಕಿರಾನ್ ಪೊಲಾರ್ಡ್ (ನಾಯಕ), ಕ್ವಿಂಟನ್ ಡಿ ಕಾಕ್, ಇಶನ್ ಕಿಶಾನ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ನಥಾನ್ ಕಲ್ಟರ್ ನೇಲ್. ಜಸ್ಪ್ರಿತ್ ಬೂಮ್ರಾ.
ಸನ್ ರೈಸರ್ಸ್ ಹೈದ್ರಬಾದ್ ಸಂಭವನೀಯ ತಂಡ
ಡೇವಿಡ್ ವಾರ್ನರ್ (ನಾಯಕ), ವೃದ್ದಿಮಾನ್ ಸಾಹ, ಮನೀಷ್ ಪಾಂಡೆ, ಜೋನಿ ಬೇರ್ ಸ್ಟೋವ್, ಅಬ್ದುಲ್ ಸಮಾದ್, ರಶೀದ್ ಖಾನ್, ನಟರಾಜನ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್, ಶಹಬಾಷ್ ನದೀಪ್, ಪ್ರಿಯಮ್ ಗರ್ಗ್/ ಅಭಿಷೇಕ್ ಶರ್ಮಾ.