ಐಪಿಎಲ್ 2020- ಮುಂಬೈ ವಿರುದ್ಧ ಹಿರಿಯ ನಾಗರಿಕ ಕ್ಲಬ್ ಗೆ ಮತ್ತೊಂದು ಹೀನಾಯ ಸೋಲು..
ಐಪಿಎಲ್ ಟೂರ್ನಿಯ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಹೀನಾಯ ಸೋಲು ಅನುಭವಿಸಿದೆ.
ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ಗೆ ತಲೆಬಾಗಿತ್ತು.
ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರಿತ್ ಬೂಮ್ರಾ ಮಾರಕ ದಾಳಿ ಹಾಗೂ ರಾಹುಲ್ ಚಾಹರ್ ಅವರ ಸ್ಪಿನ್ ಮ್ಯಾಜಿಕ್ ಮುಂದೆ ಸಿಎಸ್ ಕೆ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ ತಂಡ 9 ವಿಕೆಟ್ ಕಳೆದುಕೊಂಡು 114 ರನ್ ದಾಖಲಿಸಿತ್ತು.
ಆರಂಭಿಕ ಋತುರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದ್ರೆ, ಫಾಫ್ ಡು ಪ್ಲೇಸಸ್ ಒಂದು ರನ್ ಗೆ ಸೀಮಿತವಾದ್ರು.
ಹಾಗೇ ಅಂಬಟಿ ರಾಯುಡು (2 ರನ್) ಜಗದೀಶನ್ (0) ಧೋನಿ (16 ರನ್), ರವೀಂದ್ರ ಜಡೇಜಾ (7 ರನ್ ) ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇನ್ನು ಸ್ಯಾಮ್ ಕುರನ್ ಅವರು ಆಕರ್ಷಕ 52 ರನ್ ಗಳಿಸಿ ತಂಡದ ಮರ್ಯಾದೆ ಉಳಿಸಿದ್ರು. ಇನ್ನುಳಿದಂತೆ ದೀಪಕ್ ಚಾಹರ್ (0), ಶಾರ್ದೂಲ್ ಥಾಕೂರ್ (11) ಹಾಗೂ ಇಮ್ರಾನ್ ತಾಹೀರ್ (ಅಜೇಯ 13 ರನ್) ಗಳಿಸಿದ್ರು.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದ್ರೆ, ಜಸ್ಪ್ರಿತ್ ಬೂಮ್ರಾ 2 ವಿಕೆಟ್ ಹಾಗೂ ರಾಹುಲ್ ಚಾಹರ್ 2 ವಿಕೆಟ್ ಉರುಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 12.2 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಸ್ನಾಯು ಸೆಳೆತದಿಂದಾಗಿ ರೋಹಿತ್ ಬದಲು ಇಶಾನ್ ಕಿಶನ್ ಅವರು ತಂಡದ ಇನಿಂಗ್ಸ್ ಆರಂಭಿಸಿದ್ರು.
ಇಶಾನ್ ಕಿಶನ್ ಅವರು 37 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಹಾಯದಿಂದ ಅಜೇಯ 68 ರನ್ ಸಿಡಿಸಿದ್ರು.
ಇನ್ನೊಂದೆಡೆ ಕ್ವಿಂಟನ್ ಡಿ ಕಾಕ್ ಅವರು 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 46 ರನ್ ಗಳಿಸಿದ್ರು.
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮೊದಲ ಬಾರಿ 10 ವಿಕೆಟ್ ಗಳಂದ ಸೋಲು ಅನುಭವಿಸಿದ್ದು.
ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.