ಐಪಿಎಲ್ 2020- ರಾಜಸ್ತಾನ ರಾಯಲ್ಸ್ ಗೆ ತಲೆಬಾಗಿದ ಕಿಂಗ್ಸ್ ಇಲೆವೆನ್ ಪಂಜಾಬ್
ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಏಳು ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿತು.
ಗೆಲ್ಲಲೇಬೇಕಾದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನಾಡಿದ್ದವು. ಕಿಂಗ್ಸ್ ಪಂಜಾಬ್ ತಂಡದ ಕ್ರಿಸ್ ಗೇಲ್ ಮಿಂಚಿನ ಆಟ ರಾಜಸ್ತಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರ ಅಬ್ಬರದ ಆಟದ ಮುಂದೆ ಮಂಕಾಗಿ ಹೋಯ್ತು.
ಅಬುಧಾಬಿಯಲ್ಲಿ ಟಾಸ್ ಸೋತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.
ಆದ್ರೆ ಆರಂಭದಲ್ಲೇ ಆರಂಭಿಕ ಮನ್ ದೀಪ್ ಸಿಂಗ್ ಡಕೌಟಾದ್ರು.
ಬಳಿಕ ಕೆ.ಎಲ್. ರಾಹುಲ್ ಅವರನ್ನು ಜೊತೆ ಸೇರಿಕೊಂಡ ಕ್ರಿಸ್ ಗೇಲ್ ಮಿಂಚಿನ ಆಟವನ್ನಾಡಿದ್ದರು.
ಎರಡನೇ ವಿಕೆಟ್ ಗೆ ರಾಹುಲ್ ಮತ್ತು ಗೇಲ್ 14.3 ಓವರ್ ಗಳಲ್ಲಿ 119 ರನ್ ಕೂಡ ಕಲೆ ಹಾಕಿದ್ದರು.
ಈ ಹಂತದಲ್ಲಿ ಕೆ.ಎಲ್. ರಾಹುಲ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 46 ರನ್ ದಾಖಲಿಸಿದ್ರು.
ನಂತರ ನಿಕೊಲಾಸ್ ಪೂರನ್ 10 ಎಸೆತಗಳಲ್ಲಿ ಮೂರು ಸಿಕ್ಸರ್ ಗಳ ಸಹಾಯದಿಂದ 22 ರನ್ ಗಳಿಸಿದ್ರು.
ಇನ್ನು ಸ್ಫೋಟಕ ಆಟವನ್ನಾಡಿದ್ದ ಕ್ರಿಸ್ ಗೇಲ್ 63 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್ ಗಳ ನೆರವನಿಂದ 99 ರನ್ ಸಿಡಿಸಿದ್ರು.
ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.
ಕಿಂಗ್ಸ್ ಪಂಜಾಬ್ ತಂಡದ ಸವಾಲಿಗೆ ರಾಜಸ್ತಾನ ರಾಯಲ್ಸ್ ದಿಟ್ಟ ಉತ್ತರವನ್ನೇ ನೀಡಿತ್ತು.
ಬೆನ್ ಸ್ಟೋಕ್ಸ್ 26 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 50 ರನ್ ಗಳಿಸಿದ್ರು. ಇನ್ನೊಂದೆಡೆ ರಾಬಿನ್ ಉತ್ತಪ್ಪ 23 ಎಸೆತಗಳಲ್ಲಿ 30 ರನ್ ದಾಖಲಿಸಿದ್ರು.
ಬಳಿಕ ಸಂಜು ಸಾಮ್ಸನ್ ಅವರು 25 ಎಸೆತಗಳಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 48 ರನ್ ಗಳಿಸಿ ರನೌಟಾದ್ರು.
ಏತನ್ಮಧ್ಯೆ ನಾಯಕ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಸ್ಟೀವನ್ ಸ್ಮಿತ್ ಅಜೇಯ 31 ರನ್ ಗಳಿಸಿದ್ರೆ, ಜೋಸ್ ಬಟ್ಲರ್ ಅಜೇಯ 22 ರನ್ ದಾಖಲಿಸಿದ್ರು. ರಾಜಸ್ತಾನ ರಾಯಲ್ಸ್ ತಂಡ 17.3 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 186 ರನ್ ದಾಖಲಿಸಿತು.
ಆಲ್ ರೌಂಡ್ ಆಟವನ್ನಾಡಿದ್ದ ಬೆನ್ ಸ್ಟೋಕ್ಸ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.
ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋತ್ರೂ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ರಾಜಸ್ತಾನ ರಾಯಲ್ಸ್ ಐದನೇ ಸ್ಥಾನದಲ್ಲಿದೆ.
ಇದೀಗ ಉಭಯ ತಂಡಗಳಿಗೆ ಅಂತಿಮ ಪಂದ್ಯಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.