ಐಪಿಎಲ್ 2021 | ಅಬುದಾಭಿಯಲ್ಲಿ ರಾಜಸ್ಥಾನ್ `ರಾಯಲ್’ ಆಟ

1 min read
Rajasthan saaksha tv

ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಎಲ್ಲವೂ ಇತ್ತು. ಬೌಂಡರಿಗಳ ಸುರಿಮಳೆ ಆಯಿತು. ಸಿಕ್ಸರ್​​ಗಳು ಸಿಡಿದವು. ರುತುರಾಜ್​​ ಶತಕದ ಸಂಭ್ರಮ ನೋಡಲು ಸಿಕ್ಕಿತ್ತು. ರಾಜಸ್ಥಾನದ ಅಬ್ಬರದ ಆರಂಭ, ಯಶಸ್ವಿ ಜೈಸ್ವಾಲ್​​ ಸ್ಪೋಟಕ ಬ್ಯಾಟಿಂಗ್​​​​… ಟಿ20 ಆಟಕ್ಕೆ ಏನು ಬೇಕಿತ್ತೋ ಅದೆಲ್ಲವೂ ನೋಡಲು ಸಿಕ್ಕಿತ್ತು.  ಒಟ್ಟು 18 ಸಿಕ್ಸರ್​​ಗಳು ಸಿಡಿದರೆ,  ಎರಡೂ ಇನ್ನಿಂಗ್ಸ್​​ಗಳಿಂದ 33 ಫೋರ್​​ಗಳು ದಾಖಲಾಗಿದ್ದವು.

ಅಬುಧಾಭಿಯಲ್ಲಿ ಟಾಸ್​ಗೆದ್ದ ರಾಜಸ್ಥಾನ ರಾಯಲ್ಸ್​​ ಚೆನ್ನೈ ಸೂಪರ್​​ ಕಿಂಗ್ಸ್​ ತಂಡವನ್ನು ಮೊದಲು ಬ್ಯಾಟಿಂಗ್​​ಗೆ ಇಳಿಸಿತು.  ಫಾಫ್​ ಡು ಪ್ಲೆಸಿಸ್​​ ಮತ್ತು ರುತುರಾಜ್​​ ಗಾಯಕ್ವಾಡ್​​​ ಎಂದಿನಂತೆ ಉತ್ತಮ ಆರಂಭ ತಂದುಕೊಟ್ಟರು. ಮೊದಲ ವಿಕೆಟ್​​ಗೆ ಈ ಜೋಡಿ 47 ರನ್​​ಗಳ ಜೊತೆಯಾಟ ತಂದುಕೊಟ್ಟಿತು.  19 ಎಸೆತಗಳಲ್ಲಿ  25 ರನ್​ಗಳಿಸಿದ ಫಾಫ್​​ ತೆವಾಟಿಯ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಎಡವಿ ಸ್ಟಂಪ್​​ ಔಟ್​​ ಆದರು. ಭಡ್ತಿ ಪಡೆದು ಬಂದ ಸುರೇಶ್​​​ ರೈನಾ ಮತ್ತೆ ವೈಫಲ್ಯ ಅನುಭವಿಸಿ 3 ರನ್​ಗಳಿಗೆ ತೆವಾಟಿಯಾಗೆ ವಿಕೆಟ್​​ ಒಪ್ಪಿಸಿದರು.

ರುತುರಾಜ್​​ ಗಾಯಕ್ವಾಡ್​​ ಜೊತೆ ಸೇರಿದ ಮೊಯಿನ್​​ ಅಲಿ ಉತ್ತಮ ಜೊತೆಯಾಟ ಕಟ್ಟಿದರು.  ರುತುರಾಜ್​​ ಅರ್ಧಶತಕದ ಸಂಭ್ರಮ ಕೂಡ ಆಚರಿಸಿಕೊಂಡರು. ಆದರೆ ಮೊಯಿನ್​ ಅಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಸ್ಟಂಪ್​​ಔಟ್​​ ಆದರು.  ಅಂಬಟಿ ರಾಯಡು ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ.

ರುತುರಾಜ್​​ ಜೊತೆ ಸೇರಿದ ಜಡೇಜಾ ಉತ್ತಮ ಜೊತೆಯಾಟ ಕಟ್ಟಿದರು. ರುತುರಾಜ್​​​​​​ ಬೌಂಡರಿ, ಸಿಕ್ಸರ್​​ಗಳ ಮೂಲಕ ಅಬ್ಬರಿಸಿದರು. ಜಡೇಜಾ ಕೂಡ ಸ್ಲಾಗ್​​ ಓಫವರನ ಎಲ್ಲಾ ಲಾಭ ಪಡೆದುಕೊಂಡು.  ಈ ಜೋಡಿ  ಅಬ್ಬರದ 55ರನ್​​ಗಳ ಜೊತೆಯಾಟ ಆಡಿತು.  ಇನ್ನಿಂಗ್ಸ್​​ನ ಕೊನೆಯ ಎಸೆತದಲ್ಲಿ ಸಿಕ್ಸರ್​​ ಮೂಲಕ ರುತುರಾಜ್​​ ಶತಕದ ಸಂಭ್ರಮವನ್ನು ಕೂಡ ಆಚರಿಸಿದರು. ಜಡೇಜಾ 15 ಎಸೆತಗಳಲ್ಲಿ ಅಜೇಯ 32 ರನ್​​ಗಳಿಸಿದರು. 9 ಬೌಂಡರಿ ಮತ್ತು 5 ಸಿಕ್ಸರ್​​ ನೆರವಿನಿಂದ ರುತುರಾಜ್​​ 60 ಎಸೆತಗಳಲ್ಲಿ ಅಜೇಯ 101ರನ್​​ಗಳಿಸಿದರು. ನಿಗದಿತ 20 ಓವರುಗಳಲ್ಲಿ ಚೆನ್ನೈ 4 ವಿಕೆಟ್​​ ಕಳೆದುಕೊಂಡು 189 ರನ್​​ಗಳಿಸಿತ್ತು.

Rajasthan saaksha tv

ಗುರಿ ಬೆನ್ನಟ್ಟ ಹೊರಟ ರಾಯಲ್ಸ್​​ಗೆ ಎವಿನ್​​ ಲೆವಿಸ್​​ ಮತ್ತು ಯಶಸ್ವಿ ಜೈಸ್ವಾಲ್​​ ವಿಸ್ಪೋಟಕ ಆರಂಭ ತಂದುಕೊಟ್ಟರು.  ಕೇವಲ 24 ಎಸೆತಗಳಲ್ಲಿ 50 ರನ್​​ಗಳ ಜೊತೆಯಾಟ ಬಂದಿತ್ತು. ಪವರ್​ ಪ್ಲೇ- ಮುಗಿಯುವರಷ್ಟರಲ್ಲಿ ರಾಜಸ್ಥಾನ ಮೊತ್ತ80 ರನ್​​ಗಳಾಗಿತ್ತು. ಲೆವಿಸ್​ 12 ಎಸೆತಗಳಲ್ಲಿ 27 ರನ್​​ಗಳಿಸಿ ಔಟಾದರು. ಸ್ಪೋಟಕ ಆಟ ಆಡಿದ ಜೈಸ್ವಾಲ್​ 6 ಫೋರ್​​, 3 ಸಿಕ್ಸರ್​ ನೆರವಿನಿಂದ ಕೇವಲ 21 ಎಸೆತಗಳಲ್ಲಿ 50 ರನ್​​ಗಳಿಸಿ ಆಸೀಫ್​​ಗೆ ವಿಕೆಟ್​​ ಒಪ್ಪಿಸಿದರು.

ಸಂಜುಸ್ಯಾಮ್ಸನ್​​ ಮತ್ತು ಶಿವಂ ದುಬೆ ಅಬ್ಬರದ ಆಟವನ್ನು ಕೈ ಬಿಡಲಿಲ್ಲ. ಅದರಲ್ಲೂ ದುಬೆ ಸಿಕ್ಸರ್​​ಗಳ ಮೂಲಕ ಅಟ್ಟಹಾಸ ಮೆರೆದರು.  ಚೆನ್ನೈ ಬೌಲರ್​​ಗಳು ದಿಕ್ಕು ತಪ್ಪಿದರು. ಸ್ಲೋವರ್​ ಬಾಲ್​​​ಗಳು ಅಂದುಕೊಂಡ ಜಾಗದಲ್ಲಿ ಬೀಳಲಿಲ್ಲ. ಸ್ಪಿನ್​​​​​ ಆಗಲೇ ಇಲ್ಲ. ಚೆನ್ನೈ ದಿಕ್ಕು ತಪ್ಪಿತ್ತು. ನೋಡ ನೋಡುತ್ತಿದ್ದಂತೆ ದುಬೆ 31 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು.

ಇನ್ನೇನು ದುಬೆ ಮತ್ತು ಸ್ಯಾಮ್ಸನ್​​ ರಾಯಲ್ಸ್​​ ತಂಡವನ್ನು ಗೆಲ್ಲಿಸಿಯೇ ಬಿಟ್ಟರು ಅನ್ನುವ ಹೊತ್ತಿಗೆ ಥಾಕೂರ್​​​​ 28 ರನ್​​ಗಳಿಸಿದ್ದ ಸ್ಯಾಮ್ಸನ್​​ ವಿಕೆಟ್​ ಕಬಳಿಸಿದರು. ಆದರೆ ದುಬೆ ಜೊತೆ ಸೇರಿದ ಗ್ಲೆನ್​​ ಫಿಲಿಪ್ಸ್​​ ಗೆಲುವಿಗೆ ಬೇಕಾಗಿದ್ದ ರನ್​​ ಗಳಿಸಿಕೊಟ್ಟರು. ರಾಯಲ್ಸ್​​​​​​​​ 19.3 ಓವರುಗಳಲ್ಲಿ 3 ವಿಕೆಟ್​​ ಕಳೆದುಕೊಂಡು ಗುರಿ ತಲುಪಿತು. 7 ವಿಕೆಟ್​​ಗಳ ಜಯ ಸಾಧಿಸಿದ ರಾಯಲ್ಸ್​​ ಪ್ಲೇ-ಆಫ್​​ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಚೆನ್ನೈ ಸೋತರೂ ಅಗ್ರಸ್ಥಾನದಿಂದ ಕೆಳಗೆ ಇಳಿಯಲಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd