ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಫಸ್ಟ್ ಮ್ಯಾಚ್..!
ಇಂದಿನಿಂದ ವಿಶ್ವವೇ ಕಾದು ಕುಳಿತಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಜಾತ್ರೆ ಶುರುವಾಗಲಿದೆ. ಮಯಾನಗರಿ ಮುಂಬೈನ ವಾಂಖೇಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಗುದ್ದಾಟ ನಡೆಸಲಿವೆ.
ನಯಾ ಲುಕ್ ನೊಂದಿಗೆ ಸಂಜೆ 7:30ಕ್ಕೆ ಬಹು ನಿರೀಕ್ಷಿತ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಧಿಕೃತವಾಗಿ ಆರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈ ಬಾರಿ ನೂತನ ನಾಯಕರ ನೇತೃತ್ವದಲ್ಲಿ ಅಖಾಡಕ್ಕೆ ಧುಮುಖಲಿವೆ.
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಸರ್ ರವೀಂದ್ರ ಜಡೇಜಾ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿದ್ದರೇ, ಟೀಂ ಇಂಡಿಯಾದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇದೇ ಮೊದಲ ಬಾರಿಗೆ ಮುನ್ನಡೆಸಲಿದ್ದಾರೆ.
ಕ್ಯಾಶ್ ರಿಚ್ ಲೀಗ್ ಈಗಾಗಲೇ 4 ಬಾರಿ ಚಾಂಪಿಯನ್ ಪಟ್ಟಕ್ಕೇ ಏರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದೆ. ಇತ್ತ 2 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಹೊಸ ನಾಯಕತ್ವದಲ್ಲಿ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಲಿದೆ.
ಇನ್ನು ಈ ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈ ವರೆಗೂ 26 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 17 ಬಾರಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 8 ಬಾರಿ ಗೆದ್ದಿದೆ. ಇನ್ನೊಂದು ಪಂದ್ಯದ ಫಲಿತಾಂಶ ಬಂದಿಲ್ಲ. ಟ್ರ್ಯಾಕ್ ರಿಕಾರ್ಡ್ ನೋಡಿದ್ರೆ ಚೆನ್ನೈ ತಂಡ ಮೇಲು ಗೈ ಸಾಧಿಸಿದೆ.
ಮತ್ತೊಂದೆಡೆ ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಅಪರೂಪದ ದಾಖಲೆಗಳನ್ನ ಬರೆಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಈ ಪಂದ್ಯದಲ್ಲಿ ಇನ್ನೂ 84 ರನ್ ಗಳಿಸಿದರೆ ಐಪಿಎಲ್ ನಲ್ಲಿ 4000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವೇನ್ ಬ್ರಾವೋ 4 ವಿಕೆಟ್ ಪಡೆದರೇ ಐಪಿಎಲ್ ನಲ್ಲಿ ಮಲಿಂಗಾ ದಾಖಲೆ ಮುರಿಯಲಿದ್ದಾರೆ. ಮಾಲಿಂಗಾ ಐಪಿಎಲ್ ನಲ್ಲಿ 170 ವಿಕೆಟ್ ಪಡೆದಿದ್ದಾರೆ. ಸದ್ಯ ಬ್ರಾವೋ 167 ವಿಕೆಟ್ ಪಡೆದಿದ್ದು, ಲಸಿತ್ ದಾಖಲೆ ಮುರಿಯಲು 4 ವಿಕೆಟ್ ಮಾತ್ರ ಬೇಕಾಗಿದೆ.
ಇನ್ನು ಈ ಬಾರಿ ಕೆಕೆ ಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಅಜಿಂಕ್ಯಾ ರಹಾನೆ ಐಪಿಎಲ್ ನಲ್ಲಿ 4000 ರನ್ ಗಡಿ ದಾಟಲು 59 ರನ್ ಗಳ ಅವಶ್ಯಕತೆ ಇದೆ.