ಟೆಸ್ಟ್ ಕ್ರಿಕೆಟ್ ನಲ್ಲಿ ಇಶಾಂತ್ ಶರ್ಮಾ 300 ವಿಕೆಟ್
ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಡಾನ್ ಲಾರೆನ್ಸ್ ಅವರ ವಿಕೆಟ್ ಪಡೆಯುವ ಮೂಲಕ ವೇಗಿ ಇಶಾಂತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.
ಚೆನ್ನೈ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಇಶಾಂತ್ ಶರ್ಮಾ ಅವರು ಡಾನ್ ಲಾರೆನ್ಸ್ ಅವರನ್ನು ಎಲ್ ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಭಾರತದ ಮೂರನೇ ವೇಗಿಯಾಗಿ ಹೊರಹೊಮ್ಮಿದ್ರು. ಈ ಹಿಂದೆ ಕಪಿಲ್ ದೇವ್ ಮತ್ತು ಜಹೀರ್ ಖಾನ್ ಈ ಸಾಧನೆ ಮಾಡಿದ್ದರು. ಹಾಗೇ ಭಾರತದ ಆರನೇ ಬೌಲರ್ ಹೌದು. ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಅಶ್ವಿನ್ ಸಾಲಿಗೆ ಇದೀಗ ಇಶಾಂತ್ ಶರ್ಮಾ ಕೂಡ ಸೇರಿಕೊಂಡಿದ್ದಾರೆ.
ಒಟ್ಟಾರೆಯಾಗಿ ಇಶಾಂತ್ ಶರ್ಮಾ ಅವರು 98 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 177 ಇನಿಂಗ್ಸ್ ಗಳಲ್ಲಿ 18321 ಎಸೆತಗಳನ್ನು ಹಾಕಿದ್ದಾರೆ. ಹಾಗೇ ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ 9674 ರನ್ ಗಳನ್ನು ನೀಡಿದ್ದಾರೆ. 74ಕ್ಕೆ ಏಳು ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. 11 ಬಾರಿ ಐದು ವಿಕೆಟ್ ಗಳ ಗೊಂಚಲು ಹಾಗೂ ಒಂದು ಬಾರಿ ಹತ್ತು ವಿಕೆಟ್ ಗಳ ಗೊಂಚಲನ್ನು ಪಡೆದುಕೊಂಡಿದ್ದಾರೆ.
ಇಶಾಂತ್ ಶರ್ಮಾ ಅವರು ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ.
2007ರಲ್ಲಿ ಬಾಂಗ್ಲಾ ದೇಶದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಇಶಾಂತ್ ಶರ್ಮಾ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.