ಬೆಳಗಾವಿ: ಜಿಲ್ಲೆಯ ಗಡಿಗ್ರಾಮ ಪಿರನವಾಡಿಯಲ್ಲಿ ಎದ್ದಿದ್ದ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪ್ರತಿಮೆ ವಿವಾದ ಸುಖಾಂತ್ಯಗೊಂಡಿದೆ. ನಿನ್ನೆ ಆಗಿರುವ ತೀರ್ಮಾನ ರಾಷ್ಟ್ರಭಕ್ತರಿಗೆ ಸಂತೋಷ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಣ್ಣ, ಶಿವಾಜಿ ಜಾತಿ-ಭಾಷೆಯನ್ನು ಮೀರಿದ್ದಾರೆ. ಬೆಳಗಾವಿಯಲ್ಲಿ ಆಗಿರುವ ತೀರ್ಮಾನ ದೇಶಕ್ಕೆ ಮಾದರಿಯಾಗಿದೆ ಎಂದಿದ್ದಾರೆ.
ಪ್ರತಿಮೆ ವಿವಾದ ಸಂಬಂಧ ಆಗಿರುವ ತೀರ್ಮಾನದಿಂದ ಎಲ್ಲರಿಗೂ ಸಂತೋಷ ಆಗಿದೆ. ಇದು ಮಾದರಿ ತೀರ್ಮಾನ ಎಂದಿರುವ ಸಚಿವ ಈಶ್ವರಪ್ಪ, ಗಲಾಟೆ ಸಂಬಂಧ ಮೂರು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಗೃಹ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಪ್ರಕರಣ ವಾಪಸ್ ಪಡೆಯುವ ಬಗ್ಗೆ ಮಾತುಕತೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ನಾನು ಬೆಳಗಾವಿಗೆ ಭೇಟಿ ನೀಡಲು ತೀರ್ಮಾನಿಸಿದ್ದೆ. ಆದರೆ ವಿವಾದ ಇಷ್ಟು ಸುಲಭವಾಗಿ ಇತ್ಯರ್ಥ ಆಗುತ್ತದೆ ಎಂದು ಗೊತ್ತಿರಲಿಲ್ಲ. ಕೆಲ ಸಂಕುಚಿತ ಭಾವನೆಯವರಿಂದ ವಿವಾದ ಉಂಟಾಗಿತ್ತು ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ.