ಬೆಂಗಳೂರು: ಕಾಂಗ್ರೆಸ್ ನಾಯಕನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ವೆಂಕಟ್ ರಾಜು ಮನೆಯ ಮೇಲೆಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಅರಿಶಿನಕುಂಟೆಯಲ್ಲಿರುವ ಮನೆಯ ಮೇಲೆಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 6 ಕಾರುಗಳಲ್ಲಿ ಬಂದಿರುವ ಸುಮಾರು 20 ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹಣ ರವಾನೆಯಾಗಿದೆ ಎಂಬ ಅನುಮಾನದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ಹಣ ಸಿಕ್ಕಿದೆ ಎನ್ನಲಾಗಿದ್ದು, ಸಿಕ್ಕಿರುವ ದಾಖಲೆಗಳ ಬಗ್ಗೆ ಅಧಿಕಾರಿಗಳು ಪಂಚನಾಮೆ ಮಾಡುತ್ತಿದ್ದಾರೆ.
ವೆಂಕಟ್ ರಾಜು ಕಚೇರಿಯ ಕಬೋರ್ಡ್‍ಗಳನ್ನ ಸೀಲ್ ಮಾಡಿದ್ದಾರೆ. ಮನೆಯಲ್ಲಿ ಚಿನ್ನಾಭಾರಣ ಹಾಗೂ ಹಣ ಸಿಕ್ಕಿರುವ ಕುರಿತು ಮಾಹಿತಿ ಇದ್ದು, ಕೋಟ್ಯಾಂತರ ರೂ. ಮೌಲ್ಯದ ಜಮೀನು ನಿವೇಶನದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.