ಜೈಪುರ : ಬಿಎಸ್ ಪಿಯ ಆರು ಶಾಸಕರನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಪಾಠ ಕಲಿಸಲು ಇದು ಸಕಾಲವಾಗಿದ್ದು, ಗೆಹ್ಲೋಟ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಸಚಿನ್ ಪೈಲಟ್ ಬಣದ ಬಂಡಾಯದ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಅವರು ಸರ್ಕಾರವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ಲಾನ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಶ್ವಾಸಮತಯಾಚನೆ ಸಲುವಾಗಿ ಬಿಎಸ್ ಪಿಯ ಆರು ಶಾಸಕರನ್ನು ಗೆಹ್ಲೋಟ್ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಇತ್ತ ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಜುಲೈ 31ರಂದು ಅವಕಾಶ ನೀಡಿದ್ದಾರೆ. ವಿಶ್ವಾಸಮತ ಸಾಬೀತು ಮಾಡುವ ವಿಶ್ವಾಸದಲ್ಲಿದ್ದ ಅಶೋಕ್ ಗೆಹ್ಲೋಟ್ ಗೆ ಈಗ ಮಾಯಾವತಿ ನಡೆ ಹಿನ್ನಡೆಯಾಗಿದೆ. ಈಗಾಗಲೇ ಮಾಯಾವತಿ ತನ್ನ ಶಾಸಕರಿಗೆ ಕಾಂಗ್ರೆಸ್ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ವಿಪ್ ನೀಡಿದ್ದಾರೆ.
ಇನ್ನು 200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿ ಕೊಳ್ಳಬೇಕಾದರೆ ಅವರಿಗೆ 101 ಸ್ಥಾನದ ಅಗತ್ಯವಿದೆ. ಆದರೆ, ಬಂಡಾಯ ಶಾಸಕರ ಹೊರತಾಗಿಯೂ ಪ್ರಸ್ತುತ ಅವರು 102 ಸ್ಥಾನವನ್ನು ಹೊಂದಿದ್ದಾರೆ. ಒಂದು ವೇಳೆ ಬಿಎಸ್ ಪಿ ಶಾಸಕರ ಮತಗಳು ಅನರ್ಹವಾದರೇ ಅಶೋಕ್ ಗೆಹ್ಲೋಟ್ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.








