Jadeja | ಜಡ್ಡು ಡಬಲ್ ಸೆಂಚೂರಿ ಮಿಸ್.. ಮತ್ತೆ ದ್ರಾವಿಡ್ ವಿಲನ್..?!
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಸೂಪರ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಎರಡನೇ ದಿನ 45 ರನ್ ಗಳಿಸಿ ಕ್ರೀಸ್ ಗೆ ಬಂದ ಜಡೇಜಾ ಕೊನೆಯವರೆಗೂ ನಿಂತು ಟೀಂ ಇಂಡಿಯಾ ಬೃಹತ್ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
228 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಔಟಾಗದೆ 175 ರನ್ ಗಳಿಸಿದ್ದ ಜಡೇಜಾ ಇನ್ನೇನು ದ್ವಿಶತದ ಸಂಭ್ರಮ ಆಚರಿಸುತ್ತಾರೆ ಅಂತಾ ಎಲ್ಲರು ಅಂದುಕೊಂಡಿದ್ದರು. ಆದ್ರೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, 574 ರನ್ ಗಳಿಗೆ ಡಿಕ್ಲೇರ್ ಘೋಷಿಸಿದರು. ಇಲ್ಲಿಗೆ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ನಿರ್ಧಾರದ ಬಗ್ಗೆ ಚರ್ಚೆ ಶುರುವಾಗಿದೆ.
ಜಡೇಜಾ ಬ್ಯಾಟ್ ಬೀಸುತ್ತಿದ್ದ ವೇಗವನ್ನು ನೋಡಿದರೆ 25 ರನ್ ಗಳಿಸುವುದು ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಜಡೇಜಾ ದ್ವಿಶತಕ ಸಿಡಿಸಲು ಬಿಡದೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದಕ್ಕೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಡಬಲ್ ಸೆಂಚೂರಿ ಸಿಡಿಸಬೇಕೆನ್ನುವುದು ಯಾವುದೇ ಕ್ರಿಕೆಟಿಗನಿಗೆ ಕನಸ್ಸಾಗಿರುತ್ತದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾಗೂ ಆ ಅವಕಾಶ ಸಿಕ್ಕಿತ್ತು. ಆದರೆ ಜಡೇಜಾ ಮೇಡನ್ ದ್ವಿಶತಕಕ್ಕೆ 25 ರನ್‌ಗಳ ಅವಶ್ಯಕತೆ ಇದ್ದಾಗ ಡಿಕ್ಲೇರ್ ಘೋಷಿಸಿದ್ದು, ಎಷ್ಟು ಸರಿ..? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಆದರೆ, ಈ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಐಡಿಯಾ ನಾಯಕ ರೋಹಿತ್ ಅವರದ್ದಲ್ಲವಂತೆ, ಬದಲಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರದ್ದು ಎನ್ನುತ್ತಿದ್ದಾರೆ ಕೆಲವರು.
ಈ ಹಿಂದೆ ದ್ರಾವಿಡ್ ನಾಯಕರಾಗಿದ್ದಾಗ ಸಚಿನ್ ದ್ವಿಶತಕ ಸಿಡಿಸದಂತೆ ತಡೆದಿದ್ದರು. 2004ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಮುಲ್ತಾನ್ ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿದ್ದಾಗ ಅಂದಿನ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರು. ದ್ರಾವಿಡ್ ನಿರ್ಧಾರದಿಂದ ಸಚಿನ್ ಕೇವಲ ಆರು ರನ್ ಗಳಿಂದ ದ್ವಿಶತಕ ಮಿಸ್ ಮಾಡಿಕೊಂಡರು. ಆ ಸಮಯದಲ್ಲಿ ದ್ರಾವಿಡ್ ಅವರ ನಿರ್ಧಾರ ತೀವ್ರ ಟೀಕೆಗಳಿಗೆ ಕಾರಣವಾಗಿತ್ತು. ದ್ರಾವಿಡ್ ನಿರ್ಧಾರ ತಪ್ಪು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಪಂದ್ಯದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ರಿಪಲ್ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 52 ರನ್‌ಗಳ ಜಯ ಸಾಧಿಸಿತ್ತು.
ಮತ್ತೆ ಇದೀಗ ರವೀಂದ್ರ ಜಡೇಜಾ ವಿಚಾರದಲ್ಲಿ ರಾಹುಲ್ ದ್ರಾವಿಡ್ ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ.
jadeja-fans-slams-rohit-sharma-rahul-dravid