ಇಂಗ್ಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಶ್ರೇಯಾಂಕದಲ್ಲಿ ಭಾರೀ ಬಡ್ತಿ ಪಡೆದಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಜೈಸ್ವಾಲ್ ಬರೋಬ್ಬರಿ 37 ಸ್ಥಾನ ಮುಂಬಡ್ತಿ ಪಡೆದು 29ನೇ ಸ್ಥಾನ ತಲುಪಿದ್ದಾರೆ. ಇದಕ್ಕೂ ಮುನ್ನ ಜೈಸ್ವಾಲ್ 66ನೇ ಸ್ಥಾನದಲ್ಲಿದ್ದರು. ಟೆಸ್ಟ್ ವೃತ್ತಿ ಜೀವನದಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 207 ರನ್ಗಳ ದಾಖಲೆಯ ರನ್ ಗಳಿಸಿದ್ದರು. ಇದು ಅವರ ಮೊದಲ ದ್ವಿಶತಕ ಕೂಡ ಆಗಿದೆ.
ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ನಲ್ಲಿ 88 ರನ್ ಕಲೆಹಾಕಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ 15 ರನ್ ಗಳಿಸಿದ್ದರು. ಎರಡನೇ ಟೆಸ್ಟ್ ನಲ್ಲಿ ದ್ವಿಶತಕ ಸಿಡಿಸಿದ್ದರು. ಅಲ್ಲದೇ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಟೆಸ್ಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ 864 ರೇಟಿಂಗ್ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದ್ದಾರೆ. ಭಾರತದ ಪೈಕಿ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಯಾವೊಬ್ಬ ಆಟಗಾರರು 10ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ವಿಕೆಟ್ ಕೀಪರ್ ರಿಷಬ್ ಪಂತ್ 12 ನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 13ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಆಲ್ರೌಂಡರ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಇದ್ದಾರೆ.