ಕಾಂಗ್ರೆಸ್ ಬಗ್ಗೆ ಜೆಡಿಎಸ್-ಬಿಜೆಪಿಯವರಿಗೆ ಭಯ : ಧ್ರುವನಾರಾಯಣ್ JDS-BJP saaksha tv
ಮೈಸೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಬಾರಿಯಂತೆ ಮೇಲುಗೈ ಸಾಧಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧ್ರುವನಾರಾಯಣ್, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ರೀತಿಯ ಫಲಿತಾಂಶ ಈ ಬಾರಿಯೂ ಮರುಕಳಿಸಲಿದೆ. ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಭಾರೀ ಬಹುಮತದಿಂದ ಕಾಂಗ್ರೆಸ್ ಗೆಲ್ಲಲಿದೆ.
ಜೆಡಿಎಸ್ ಶಾಸಕ ಜಿ ಟಿ ದೇವೆಗೌಡ, ಎಂ ಎಲ್ ಸಿ ಸಂದೇಶ್ ನಾಗರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಅವರ ಬೆಂಬಲಿಗರಿಗೆ ಸೂಚಿಸಿದ್ದಾರೆ. ಕೆ ಆರ್ ನಗರ, ಹುಣಸೂರು, ಪಿರಿಯಾಪಟ್ಟಣ, ಹೆಚ್ ಡಿ ಕೋಟೆ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿ ಗೆ ನೆಲೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಜೆಡಿಎಸ್ ಮುಳುಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಬಗ್ಗೆ ಜೆಡಿಎಸ್-ಬಿಜೆಪಿಯವರಿಗೆ ಭಯ ಉಂಟಾಗಿದೆ. ಪರಸ್ಪರ ಹೊಂದಾಣಿಕೆ ಅವರಿಬ್ಬರಿಗೂ ಅನಿವಾರ್ಯವಾಗಿದೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ಬಿಜೆಪಿಗೂ ಅನಿವಾರ್ಯವಾಗಿದೆ. ರಾಜ್ಯವ್ಯಾಪಿಯಿರುವ ಕಾಂಗ್ರೆಸ್ ಅಲೆಯಿಂದ ಭಯಪಟ್ಟು ಅವರಿಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಇದೇ ವೇಳೆ ಗ್ರಾಮ ಪಂಚಾಯ್ತಿಗಳು ನಡೆಯುತ್ತಿರುವುದೇ ಮೋದಿ ಸರ್ಕಾರದಿಂದ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಧ್ರವನಾರಾಯಣ್ ಟಾಂಗ್ ನೀಡಿದರು. ಅಧಿಕಾರ ವೀಕೇಂದ್ರೀಕರಣದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಬಿಜೆಪಿ ಪಂಚಾಯತ್ ರಾಜ್ ವ್ಯವಸ್ಥೆಯ ವಿರೋಧಿ. ಕಳೆದ ಎರಡು ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆ ಹಣ ಜನರಿಗೆ ಸಿಗುತ್ತಿಲ್ಲ. ಬಿಜೆಪಿಗರು ಬರಿ ಸುಳ್ಳು ಹೇಳುತ್ತಲೇ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದ್ದೇ ಕಾಂಗ್ರೆಸ್ ಪಕ್ಷ. ಸಂಸದ ಪ್ರತಾಪ್ ಸಿಂಹ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು.