ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾದ ಘಟನೆ ನಡೆದಿದ್ದು, ಜೆಡಿಎಸ್ (JDS) ಪಕ್ಷ ಈಗ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಇತ್ತೀಚೆಗೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ತಮ್ಮ ಅಧಿಕೃತ X ಖಾತೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದೆ: ಸುರ್ಜೇವಾಲಾ ಕೇವಲ ರಾಜ್ಯ ಉಸ್ತುವಾರಿಯೇ? ಅಥವಾ ಕರ್ನಾಟಕದ ಸಿಎಂ ಆಗಿದ್ದಾರಾ? ಇವರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಯಾರು ಅಧಿಕಾರ ಕೊಟ್ಟರು? ಎಂದು ಪ್ರಶ್ನಿಸಿದೆ.
ಇಷ್ಟು ದಿನ ಕಾಂಗ್ರೆಸ್ ಶಾಸಕರು ಮತ್ತು ಸಚಿವರೊಂದಿಗೆ ಮಾತ್ರ ಸಭೆ ನಡೆಸುತ್ತಿದ್ದ ಸುರ್ಜೇವಾಲಾ, ಈಗ ನೇರವಾಗಿ ಸರ್ಕಾರದ ಕಾರ್ಯದರ್ಶಿಗಳು, ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಇದು ಸರ್ವತೋಮುಖವಾಗಿ ಸಂವಿಧಾನ ವಿರೋಧಿ ಕ್ರಮ.
ಜೆಡಿಎಸ್ ಪಕ್ಷದ ಆರೋಪ ಏನೆಂದರೆ, ಯಾವುದೇ ರಾಜಕೀಯ ಪಕ್ಷದ ಉಸ್ತುವಾರಿ ನಾಯಕನಿಗೆ ಸರ್ಕಾರದ ಆಡಳಿತಾತ್ಮಕ ಅಧಿಕಾರಿಗಳೊಂದಿಗೆ ಅಧಿಕೃತ ಸಭೆ ನಡೆಸಲು ಯಾವುದೇ ಹಕ್ಕಿಲ್ಲ. ಈ ರೀತಿಯ ನಡೆ ರಾಜ್ಯದ ಆಡಳಿತ ವ್ಯವಸ್ಥೆಗೆ ಅಪಾಯ ಉಂಟುಮಾಡುವಂತದ್ದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವೂ ಆಗಿದೆ ಎಂದು ಹೇಳಿದ್ದಾರೆ.
ರಾಜಕೀಯ ವಲಯದಲ್ಲಿ ಈಗ ಸುರ್ಜೇವಾಲಾ ವಿರುದ್ಧ ಆಕ್ರೋಶ ಎದ್ದಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಒತ್ತಡ ಹೆಚ್ಚಾಗಿದೆ.








