ಪತ್ರಕರ್ತರ ಜಾತಕ ಕುಂಡಲಿನಿಗಳು ಬೇಕಂತೆ ಸರ್ಕಾರಕ್ಕೆ! ಇದು ನಾವೇ ತಂದುಕೊಂಡ ದುರ್ಗತಿ ಅನುಭವಿಸೋಣ ಬಿಡಿ:

1 min read

ಪತ್ರಕರ್ತರ ಜಾತಕ ಕುಂಡಲಿನಿಗಳು ಬೇಕಂತೆ ಸರ್ಕಾರಕ್ಕೆ! ಇದು ನಾವೇ ತಂದುಕೊಂಡ ದುರ್ಗತಿ ಅನುಭವಿಸೋಣ ಬಿಡಿ:

ಇದೇ ಮೊದಲ ಬಾರಿಗೆ ಆಳುವ ಸರ್ಕಾರಗಳು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜಾತಕ ಸಂಗ್ರಹಿಸಲು ಮುಂದಾಗಿದೆ. ರಾಜ್ಯದ ಪ್ರತೀ ಜಿಲ್ಲೆಗಳ ಪತ್ರಕರ್ತರ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಕರ್ನಾಟಕ ಸರ್ಕಾರದ ಗೃಹ ಸಚಿವಾಲಯ ಪೊಲೀಸ್‌ ಇಲಾಖೆಗಳಿಗೆ ನಿರ್ದೇಶನ ನೀಡಿದೆಯಂತೆ. ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರ ಎ ಟು ಜೆಡ್‌ ಮಾಹಿತಿ ಸಂಗ್ರಹಿಸಿ ಪೊಲೀಸ್‌ ವರಿಷ್ಠಾಧಿಕಾರಿಗಳ ಮೂಲಕ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಪತ್ರಕರ್ತರ ಸಮಗ್ರ ಡೇಟಾಬೇಸ್‌ ಸಿದ್ಧವಾಗಲಿದೆ. ರಾಜ್ಯದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪತ್ರಕರ್ತನ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಜಾತಿ, ಭಾವಚಿತ್ರ, ಕೆಲಸ ಮಾಡುವ ಸಂಸ್ಥೆ, ಕೆಲಸ ನಿರ್ವಹಿಸುವ ಸ್ಥಳ, ಕೆಲಸಕ್ಕೆ ಸೇರಿದ ದಿನಾಂಕ, ವಿದ್ಯಾಭ್ಯಾಸದ ವಿವರ, ಅನುಭವ, ಸೋಶಿಯಲ್‌ ಮೀಡಿಯಾಗಳಾದ ಟ್ವಿಟರ್‌, ಫೇಸ್‌ ಬುಕ್‌, ಬ್ಲಾಗ್ ಇತ್ಯಾದಿಗಳ ಮಾಹಿತಿ ಕೊನೆಗೆ ಆ ಪತ್ರಕರ್ತ ಯಾವ ಸಿದ್ಧಾಂತವನ್ನು ನಂಬಿದವನು ಎನ್ನುವತನಕ ಒಟ್ಟು ೧೮ ಕಾಲಂಗಳ ಮಾಹಿತಿ ಸಂಗ್ರಹಿಸಲು ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇಲ್ಲಿ ಏಳುವ ಪ್ರಶ್ನೆ ಈ ಡೇಟಾಬೇಸ್‌ ರಚನೆ ಹಿಂದಿರುವ ಉದ್ದೇಶವೇನು? ಪತ್ರಕರ್ತರ ಜಾತಕ ಪಡೆದುಕೊಂಡು ಸರ್ಕಾರ ಮಾಡುವುದಾದರೂ ಏನು? ಪತ್ರಕರ್ತನ ಜಾತಿ ಮತ್ತು ಸಿದ್ಧಾಂತಗಳನ್ನು ಸಂಗ್ರಹಿಸುವ ಹಿಂದಿನ ಅಸಲಿಯತ್ತೇನು? ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರನ ಖಾಸಗಿ ವಿವರಗಳನ್ನು ಸಂಗ್ರಹಿಸುವ ಹಿಂದಿನ ಹುನ್ನಾರವೇನು? ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವನ್ನು ಸರ್ಕಾರ ಕಪಿಮುಷ್ಟಿಯಲ್ಲಿ ಹಿಡಿದುಕೊಳ್ಳುವ ಪ್ರಯತ್ನವನ್ನೇನಾದರೂ ಮಾಡುತ್ತಿದೆಯಾ?

ಮಾಧ್ಯಮ ತನ್ನ ದಿಕ್ಕು ತಪ್ಪಿ ಹಲವು ವರ್ಷಗಳೇ ಆಗಿವೆ. ಸದ್ಯ ಅಸ್ತಿತ್ವದಲ್ಲಿರುವುದು ಬಹುತೇಕ ಆಳುವ ಸರ್ಕಾರಗಳ ಮುಖಸ್ತುತಿ ಮಾಡುತ್ತಿರುವ ವಾಹಿನಿಗಳು, ಜಾಣಕುರುಡು ಪ್ರದರ್ಶಿಸುವ ಸುದ್ದಿಮನೆಗಳು, ರಾಜಕೀಯ ಪಕ್ಷಗಳ ಮುಖವಾಣಿಗಳಂತಿರುವ ಕರಪತ್ರಗಳಾಗಿರುವ ಪತ್ರಿಕೆಗಳು, ಮುಂಜಾನೆ- ಸಾಯಂಕಾಲ ತಪ್ಪದೇ ವ್ಯಕ್ತಿಪೂಜೆ ಮಾಡುವ ಭಜನಾಕೇಂದ್ರಗಳು ಮಾತ್ರ. ಅದರಲ್ಲೂ ಬದ್ಧತೆ ಉಳಿಸಿಕೊಂಡಿರುವ ಬೆರಳಣಿಕೆಯ ಮಾಧ್ಯಮ ಸಂಸ್ಥೆಗಳು ಕುಟುಕು ಜೀವ ಉಳಿಸಿಕೊಂಡು ಮಾಧ್ಯಮದ ನೀತಿಸಂಹಿತಿ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ತನ್ನ ಪತ್ರಿಕಾ ಸಿದ್ಧಾಂತ ದಾರಿತಪ್ಪಿರುವುದನ್ನು ಕಂಡ ಎಷ್ಟೋ ವೃತ್ತಿಪರ ಪತ್ರಕರ್ತರು ಮಾಧ್ಯಮ ಕ್ಷೇತ್ರವನ್ನು ತೊರೆದಿದ್ದಾರೆ. ಅಳಿದುಳಿದವರು ಬದುಕು ನಡೆಸಲು ಸಿದ್ಧಾಂತದ ಜೊತೆ ರಾಜೀ ಮಾಡಿಕೊಂಡು ಒಲ್ಲದ ಮನಸಿನಿಂದ ಕೆಲಸ ಮಾಡುತ್ತಿದ್ದಾರೆ. ಈಗ ಬರುತ್ತಿರುವ ಹೊಸಬರು ಸೂಕ್ತ ಮಾರ್ಗದರ್ಶಕರಿಲ್ಲದೇ ತಾವು ಕಲಿತಿದ್ದೇ ಪಾಠ ಎಂದು ಮಾಧ್ಯಮದ ಅಸಲು ಸಿದ್ಧಾಂತವನ್ನೇ ಮರೆತಿದ್ದಾರೆ. ಮಾಧ್ಯಮಕ್ಷೇತ್ರ ಹೀಗೆ ದಿಕ್ಕು ತಪ್ಪಿದಂತಿರುವ ಸನ್ನಿವೇಶದಲ್ಲಿ ಸರ್ಕಾರ ಇಂತದ್ದೊಂದು ಪ್ರಯತ್ನಕ್ಕೆ ಮುಂದಾಗಿರುವ ಹಿಂದೆ ಕಾರಣವಿದೆ.

Journalists

ಸಾಹುಕಾರ ಜಾರಕಿಹೋಳಿ ರಾಸಲೀಲೆಯ ಸಿಡಿ ಬಿಡುಗಡೆಯ ಹಿಂದೆ ಪತ್ರಕರ್ತರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಹೀಗೊಂದು ಮುಂದಾಲೋಚನೆ ಮಾಡಿದೆ. ಪತ್ರಕರ್ತನ ಸಿದ್ಧಾಂತ ಆಳುವ ಪಕ್ಷಗಳಿಗೆ ಓಲೈಸುವ ಕಡೆಗಿದ್ದರೆ ಅವನು ಸೇಫ್‌, ಆದರೆ ಪತ್ರಕರ್ತ ಪ್ರಭುತ್ವದ ನಿರ್ಧಾರಗಳನ್ನು ಟೀಕಿಸುವವನಾದರೆ ಅವನ ಮೇಲೊಂದು ಕಣ್ಣಿಡಲಾಗುತ್ತದೆ. ಅವನ ಖಾಸಗಿ ಸಂಗತಿಗಳನ್ನು ಕಲೆಹಾಕಿ ಮುಂದೊಂದು ದಿನ ಬ್ಲಾಕ್‌ ಮೇಲ್‌ ಮಾಡುವ ಮಟ್ಟಕ್ಕಿಳಿದರೂ ಆಶ್ಚರ್ಯವೇನಿಲ್ಲ. ಈಗಾಗಲೇ ನಿಜವಾದ ಬದ್ಧತೆಯ ವೃತ್ತಿಪರ ಪತ್ರಕರ್ತರು ತೀರಾ ಅಪಾಯ ಎದುರಿಸಿದ್ದಾರೆ. ನಿಮಗೆ ನೆನಪಿರಬಹುದು ಈಗೊಂದು ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಹೊತ್ತಿನಲ್ಲೇ, ರಿಪೋರ್ಟರ್ಸ್‌ ವಿಥೌಟ್‌ ಬಾರ್ಡರ್ಸ್‌ ಎಂಬ ಸಂಸ್ಥೆ ಸುಮಾರು ೧೮೦ ದೇಶಗಳಲ್ಲಿ ಸಮೀಕ್ಷೆ ಮಾಡಿ ಒಂದು ವರದಿ ಪ್ರಕಟಿಸಿತ್ತು. ಆ ವರದಿಯ ಅನ್ವಯ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ೧೪೦ನೇ ಸ್ಥಾನಕ್ಕೆ ಕುಸಿದಿತ್ತು. ೨೦೧೯ರಲ್ಲಿ ಪತ್ರಕರ್ತರ ಮೇಲಿನ ದಾಳಿಯ ಘಟನೆಗಳು ಹೆಚ್ಚಾಗಿದ್ದವು ಮತ್ತು ೬ ಪತ್ರಕರ್ತರನ್ನು ಹತ್ಯೆ ಮಾಡಲಾಗಿತ್ತು. ಇಂಟರ್‌ ನ್ಯಾಷನಲ್‌ ಫೆಡರೇಷನ್‌ ಆಫ್‌ ಜರ್ನಲಿಸ್ಟ್‌ ಹೇಳಿಕೆಯ ಪ್ರಕಾರ ೨೦೨೦ರಲ್ಲಿ ವಿಶ್ವದಾದ್ಯಂತ ಒಟ್ಟು ೬೫ ಪತ್ರಕರ್ತರು ಸಂಶಯಾಸ್ಪದವಾಗಿ ಸಾವನ್ನಿಪ್ಪಿದ್ದಾರೆ.

೨೦೧೪ರಿಂದ ೨೦೧೯ರ ನಡುವಿನ ಅವಧಿಯಲ್ಲಿ ಪತ್ರಕರ್ತರ ಮೇಲೆ ೧೯೮ ದಾಳಿಗಳು ವರದಿಯಾಗಿವೆ. ೨೦೧೯ರ ವರ್ಷದಲ್ಲಿ ೩೬ ಮಂದಿ ಪತ್ರಕರ್ತರು, ಭಾರತದಲ್ಲಿ ಕೊಲೆಯಾಗಿದ್ದಾರೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದ ಸಮಯದಲ್ಲಿ ೬ ಪತ್ರಕರ್ತರು ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ, ಶಿಲ್ಲಾಂಗ್‌ ಟೈಮ್ಸ್‌ ಸಂಪಾದಕ ಪೇಟ್ರಿಯನ್ ಮುಖೀಮ್ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ಪತ್ರಕರ್ತರಾದ ಸಂಧ್ಯಾ ರವಿಶಂಕರ್ ಮತ್ತು ಎಂ.ಸುಚಿತ್ರಾ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಸಂದರ್ಭದಲ್ಲಿ ನಡೆಸಲಾದ ದಾಳಿಗಳು ಕೆಲವು ಉದಾಹರಣೆಗಳಷ್ಟೆ. ಬೆಳಕಿಗೆ ಬಾರದ ಅಥವಾ ಸಣ್ಣ ಸುದ್ದಿಯಾಗಿ ಜನಮಾನಸದಿಂದ ಮರೆಯಾದ ಪತ್ರಕರ್ತರ ಸಾವುಗಳು ಅದೆಷ್ಟೋ. ಕಳೆದ ಕೆಲವು ವರ್ಷಗಳಿಂದ ನಿಜವಾದ ಪತ್ರಕರ್ತ ತೀರಾ ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವ ಸ್ಥಿತಿ ಉದ್ಭವಿಸಿದೆ. ಪತ್ರಕರ್ತೆ ಗೀತಾ ಸೇಶು ಮತ್ತು ಊರ್ವಶಿ ಸರ್ಕಾರ್‌ ಸಂಶೋಧಿಸಿರುವ “ಗೆಟ್‌ ಅವೇ ವಿತ್‌ ಮರ್ಡರ್‌” ಪತ್ರಕರ್ತರ ಮೇಲಿನ ದಾಳಿ ಮತ್ತು ಕೊಲೆಗಳನ್ನು ಸವಿವರವಾಗಿ ವರದಿ ಮಾಡಿದೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಘಟಿಸಿದ ಹಿಂಸಾಚಾರದ ಬಗ್ಗೆ ಟ್ವೀಟ್‌ ಮಾಡಿದ್ದ ಕಾರಣಕ್ಕೆ ೬ ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಪತ್ರಕರ್ತರಾದ ರತಾಜ್‌ ದೀಪ್‌ ಸರ್ದೇಸಾಯಿ, ಜಾಫರ್‌ ಆಘಾ, ಮೃನಾಲ್ ಪಾಂಡೆ, ವಿನೋದ್ ಕೆ. ಜೋಸ್, ಪರೇಶ್ ನಾಥ್, ಮತ್ತು ಅನಂತ್ ನಾಗ್ ವಿರುದ್ಧ ಅಪರಾಧ ಪಿತೂರಿ, ದೇಶದ್ರೋಹ, ದ್ವೇಷ ಉತ್ತೇಜನ ಮುಂತಾದ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಈ ಪತ್ರಕರ್ತರ ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು. ಆಳುವ ಸರ್ಕಾರದ ಧೋರಣೆಗಳನ್ನು ಟೀಕಿಸಿದರೆ ದೇಶದ್ರೋಹದ ಆರೋಪ ಹೊರಿಸುವ ಕೆಟ್ಟ ಸಂಪ್ರದಾಯ ಈಗ ಶುರುವಾಗಿದೆ. ಇದಕ್ಕೆ ಬಲಿಪಶುಗಳಾಗುತ್ತಿರುವವರು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು. ಹಿಟ್ಲರ್‌ ಸರ್ವಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜರ್ಮನಿಯಲ್ಲಿ ಮತ್ತು ಮುಸಲೋನಿಯ ಇಟಲಿಯಲ್ಲಿ ಹೀಗೆ ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿತ್ತು. ಪೀಪಲ್‌ ರಿಪಬ್ಲಿಕ್‌ ಆಫ್‌ ಚೀನಾದಲ್ಲಿ ಪತ್ರಿಕೆಗಳಿಗೆ ಟೀಕಿಸುವ ಸ್ವಾತಂತ್ರ್ಯವೇ ಇಲ್ಲ. ಅಲ್ಲಿನ ಪತ್ರಿಕೆಗಳು ಅಲ್ಲಿನ ಸರ್ಕಾರಗಳ ಕರಪತ್ರಗಳಷ್ಟೆ. ೧೯೧೦ರಲ್ಲಿ ಮಹಾತ್ಮ ಗಾಂಧಿಯವರ ಹಿಂದ್‌ ಸ್ವರಾಜ್‌ ಪುಸ್ತಕವನ್ನು ಅಂದಿನ ಬ್ರಿಟಿಷ್‌ ರಾಜ್‌ ಸರ್ಕಾರ ಮುಟ್ಟುಗೋಲು ಹಾಕಿತ್ತು. ನಂತರ ೧೯೨೨ರಲ್ಲಿ ಗಾಂಧಿಯನ್ನು ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಬಂಧಿಸಿ ಅವರು ಯಂಗ್‌ ಇಂಡಿಯಾ ಪತ್ರಿಕೆಯಲ್ಲಿ ಬರೆದಿದ್ದ ಲೇಖನಗಳು ರಾಷ್ಟ್ರದ್ರೋಹ ಎಂದು ಬಗೆದು ೧೨೪-ಎ ಪರಿಚ್ಛೇದದ ದಂಡ ಸಂಹಿತೆ ಅಡಿಯಲ್ಲಿ ಬಂಧಿಸಿತ್ತು. ಇಂದಿರಾ ಪ್ರಿಯದರ್ಶಿನಿ ೧೯೭೫ರ ತುರ್ತು ಪರಿಸ್ಥಿತಿ ಘೋಷಿಸಿದ ಒಂದೇ ವಾರದಲ್ಲಿ ಪ್ರಿ ಸೆನ್ಸಾರ್‌ಶಿಪ್‌ ವ್ಯವಸ್ಥೆ ಜಾರಿಗೆ ತಂದು ಸುದ್ದಿಯನ್ನು ಸೆನ್ಸಾರ್‌ ಗೊಳಪಡಿಸಿ ಮಾಧ್ಯಮ ಸ್ವಾತಂತ್ರ್ಯ ಕತ್ತು ಹಿಸುಕುವ ಕೆಲಸ ಮಾಡಿತ್ತು. ಇಂಡಿಯನ್‌ ಎಕ್ಸ್‌ಪ್ರೆಸ್‌ನ ಕುಲದೀಪ್‌ ನಯ್ಯರ್‌, ಟೈಮ್ಸ್‌ ಆಫ್‌ ಇಂಡಿಯಾದ ಕೆ.ಆರ್‌. ಸೌಂದರ್‌ ರಾಜನ್‌, ಮದರ್‌ಲ್ಯಾಂಡ್‌ನ ಕೆ.ಆರ್‌. ಮಲ್ಕಾನಿ ಸೇರಿದಂತೆ ಸುಮಾರು ೨೫೩ ಪತ್ರಕರ್ತರನ್ನು ಬಂಧಿಸಿ ಜೈಲಿಗಟ್ಟಿತ್ತು ಇಂದಿರಾ ಸರ್ಕಾರ. ಇವೆಲ್ಲವೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಿದ ಕೆಲವು ಉದಾಹರಣೆಗಳು. ಅದರ ನಂತರದ ಪರಿಣಾಮ ಈಗ ಇತಿಹಾಸ.

Journalists

ಒಂದು ಕಡೆ ಮಾಧ್ಯಮಗಳೆಲ್ಲವೂ ಆಳುವ ಸರ್ಕಾರಗಳ ಪರವಾಗಿ ಬ್ಯಾಟಿಂಗ್‌ ಮಾಡುತ್ತಿರುವ ಹೊತ್ತಿನಲ್ಲಿ ಕೆಲವು ಮಾಧ್ಯಮಗಳಾದರೂ ಬದ್ಧತೆ ಉಳಿಸಿಕೊಂಡು ನಿಜವಾದ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿವೆ. ಉಳಿದ ಮಾಧ್ಯಮದ ಘನತೆಯ ಅರಿವಿರುವ ಪತ್ರಕರ್ತರು ಇಂಡಿಪೆಂಡೆಂಟ್‌ ಜರ್ನಲಿಸಂ ಮತ್ತು ಸೋಶಿಯಲ್‌ ಮೀಡಿಯಾ ಪ್ಲಾಟ್‌ ಫಾರಂ ಜರ್ನಲಿಸಂ ಜೊತೆಗೆ ಸಿಟಿಜನ್‌ ಜರ್ನಲಿಸಂ ಮೂಲಕ ಒಂದಷ್ಟು ನಂಬಿಕೆ ಉಳಿಸಿಕೊಂಡಿದ್ದಾರೆ. ಒಂದು ಮೂಲದ ಮಾಹಿತಿಯ ಪ್ರಕಾರ ಪ್ರಪಂಚದ ೭೭೦ ಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ ಶೇ. ೫೩ಕ್ಕೂ ಹೆಚ್ಚು ಇಂಟರ್ನೆಟ್‌ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಭಾರತದ ವಿಚಾರಕ್ಕೆ ಬರುವುದಾದರೇ ನಮ್ಮ ೧೩೭ ಕೋಟಿ ಜನಸಂಖ್ಯೆಯಲ್ಲಿ ಸುಮಾರು ೪೦ ಕೋಟಿ ಜನ ಸಾಮಾಜಿಕ ಮಾಧ್ಯಮದಲ್ಲಿ ನಿರತರಾಗಿದ್ದಾರೆ. ೪೦ ಕೋಟಿ ವಾಟ್ಸ್‌ ಆಪ್‌ ಬಳಕೆದಾರರು, ೨೭ ಕೋಟಿ ಫೇಸ್ಬುಕ್‌ ಬಳಕೆದಾರರು ಮತ್ತು ೮ ಕೋಟಿ ಇನ್‌ ಸ್ಟಾಗ್ರಾಂ ಬಳಕೆದಾರರು ಆನ್‌ ಲೈನ್‌ ನಲ್ಲಿ ದೇಶದ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ. ಹೀಗಾಗಿ ಇಂಡಿಪೆಂಡೆಂಟ್‌ ಮೀಡಿಯಾ ಮತ್ತು ಡಿಜಟಲ್‌ ಪತ್ರಿಕೋದ್ಯಮ ಹಿಂದೆಂದಿಗಿಂತಲೂ ಶಕ್ತವಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಡಿಜಿಟಲ್‌ ಜರ್ನಲಿಸಂ ಪ್ಲಾಟ್‌ ಫಾರ್ಮ್‌ ನಲ್ಲಿ ಇರುವ ಆದಾಯ ಅಷ್ಟಕಷ್ಟೆ. ಹೇಗೋ ಕಷ್ಟವೋ ಸುಖವೋ ತಮ್ಮದೊಂದು ಸಣ್ಣ ಮಾಧ್ಯಮ ಸಂಸ್ಥೆ ಕಟ್ಟಿಕೊಂಡು ತಾವು ನಂಬಿದ ತತ್ವದ ಪ್ರಕಾರ ಕೆಲಸ ಮಾಡುತ್ತಿರುವ ಪತ್ರಕರ್ತರ ಮೇಲೆ ಈಗ ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ. ಹೀಗಾಗಿಯೇ ಪತ್ರಕರ್ತರನ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನೂ ಸಂಗ್ರಹಿಸಲು ನಿರ್ದೇಶನ ನೀಡಿದೆ ಗೃಹ ಸಚಿವಾಲಯ. ಕರ್ನಾಟಕ ಈ ಹಿಂದಿನಿಂದಲೂ ಪ್ರಜ್ಞಾವಂತ ಜನರಿರುವ ರಾಜ್ಯ ಎಂದು ಕರೆಸಿಕೊಂಡಿತ್ತು. ಆದರೆ ಈಗೀಗ ಧರ್ಮದ ಹೆಸರಿನಲ್ಲಿ ಜಾತಿಗಳ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸಿದ ಜನನಾಯಕರು ಆ ಹಣೆಪಟ್ಟಿಯಿಂದ ಮುಕ್ತಗೊಳಿಸಿದ್ದಾರೆ.

ಆಳುವ ಎಲ್ಲಾ ಪಕ್ಷಗಳಿಗೂ ಪತ್ರಿಕೆ ಮತ್ತು ಮಾಧ್ಯಮ ಸಂಸ್ಥೆಗಳು ಸಮರ್ಥ ಮತ್ತು ಮೊದಲ ಪ್ರತಿಪಕ್ಷವಾಗಬೇಕಿತ್ತು. ಆದರೆ ಮಾಧ್ಯಮ ಉದ್ಯಮಗಳಾಗಿ, ಆಳುವ ಪಕ್ಷದ ಜನನಾಯಕರೇ ಮಾಧ್ಯಮದ ದಣಿಗಳಾಗಿ ಬಂದು ಕೂತಾಗಲೇ ಮಾಧ್ಯಮದ ಬದ್ಧತೆ ಮತ್ತು ನೈತಿಕತೆ ಸತ್ತು ಹೋಯಿತು. ಈ ಹಿಂದೆ ವಿಧಾನಸಭಾ ಅಧಿವೇಶನಕ್ಕೆ ಪತ್ರಕರ್ತರನ್ನು ನಿರ್ಬಂಧಿಸಿದಾಗ ಬೊಬ್ಬೆ ಹೊಡೆದ ಹಿರಿಯ ಪತ್ರಕರ್ತರು ಈಗ ಸೊಂಪು ನಿದ್ದೆ ಹೊಡೆಯುತ್ತಿದ್ದಾರೆ. ವಿಧಾನಸೌಧದ ಮೂರನೆಯ ಮಹಡಿಯಲ್ಲಿ ಕುಳಿತಿರುವ ಒಡೆಯರ ಪ್ರತೀ ಅಣತಿಗಳನ್ನು ಪಾಲಿಸುವುದಕ್ಕೆ ಪುರುಸೊತ್ತಿಲ್ಲದ ಮಾಧ್ಯಮದ ಪ್ರಮುಖರಿಗೆ ಮುಂದೆ ಕಾದಿರುವ ಅಪಾಯದ ಗ್ರಹಣವಾಗುತ್ತಿಲ್ಲ. ಯಾವ ಸರ್ಕಾರಗಳಿಗೂ ಪತ್ರಕರ್ತನ ಡೇಟಾಬೇಸ್‌ ಸಂಗ್ರಹಿಸಿ, ಅವನ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕಿಲ್ಲ. ಪತ್ರಿಕೆಗಳಿಗೆ ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಕಟ್ಟ ಕಡೆಯ ದರ್ಜೆಯ ಪತ್ರಕರ್ತನಿಗೂ ಸಂವಿಧಾನ ವಿಶೇಷ ಪ್ರಿವಿಲೇಜ್‌ ಒದಗಿಸಿದೆ. ಈಗ ಸರ್ಕಾರ ಮಾಡಹೊರಟಿರುವುದು ಆ ಸಂವಿಧಾನದತ್ತ ಹಕ್ಕಿನ ಧಮನವಷ್ಟೆ.

-ವಿಶ್ವಾಸ್‌ ಭಾರದ್ವಾಜ್‌

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd