ಇಥಿಯೋಪಿಯ ಇಂದ ಶಿವಮೊಗ್ಗದ ಮೂಲಕ ಕೊಡಗಿನವರೆಗೆ ಕಾಫಿಯ ಪಯಣ (ಭಾಗ ೩) (ಅಂತಿಮ ಭಾಗ) Saakshatv Naavu kelada charitre episode6
1834ರಲ್ಲಿ ಕೊಡಗು ಬ್ರಿಟೀಷರ ಸ್ವಾಧೀನಕ್ಕೆ ಒಳಪಟ್ಟ ನಂತರದಲ್ಲಿ ಕೊಡಗಿನಲ್ಲಿ ನಡೆದ ಹಲವಾರು ವಿದ್ಯಮಾನಗಳಲ್ಲಿ ಕಾಫಿಯ ಕ್ರಾಂತಿಯೇ ಪ್ರಮುಖವಾದದ್ದು, ಏಕೆಂದರೆ ಇದು ಮುಂದಿನ ಐವತ್ತು ವರ್ಷಗಳಲ್ಲಿ ಕೊಡಗಿನ ದೃಷ್ಟಿಕೋನವನೇ ಬದಲಾಯಿಸುತ್ತದೆ. Saakshatv Naavu kelada charitre episode6
ಬ್ರಿಟಿಷರು ಕಾಫಿಯನ್ನು ವ್ಯಾಪಾರೀಕರಿಸಿದ ನಂತರದಲ್ಲಿ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಉದ್ಭವಿಸಿದ ಕಾಫಿ ಎಸ್ಟೇಟ್ಗಳು ಅಂದಿನ ಕೊಡಗಿನ ಸೂಪರಿಟೆಂಡೆಂಟ್ ಆಗಿದ್ದ ಕ್ಯಾಪ್ಟನ್ ಲೇ ಹಾರ್ಡಿ (Capt Le Hardy) ಕೊಡಗಿನ ಪಶ್ಚಿಮ ಘಟ್ಟಗಳ ಇಳಿಜಾರಿನಲ್ಲಿ ಕಾಫಿ ಬೆಳೆಸಲು ಉತ್ತೇಜನ ನೀಡಿದಾಗ ಜಾನ್ ಫೌಲರ್ (John Fowler) ಪ್ರಪ್ರಥಮವಾಗಿ 1854ರಲ್ಲಿ ಬೃಹತ್ ಕಾಫಿ ತೋಟವನ್ನು ನಿರ್ಮಿಸುತ್ತಾನೆ. ಇದಾದನಂತರ ನಡೆದಿದ್ದೆ ಇತಿಹಾಸ, ನೋಡ ನೋಡುತ್ತಲೇ ಎಚ್ ಮನ್ನ್ (H Mann) 1855ರಲ್ಲಿ ಸಂಪಜೆ ಘಟ್ಟದಲ್ಲಿ, ಡಾ ಮ್ಯಕ್ಸವೇಲ್ (Dr Maxwell) 1856ರಲ್ಲಿ ಪೆರಂಬಾಡಿ ಘಟದಲ್ಲಿ ಮತ್ತು ಕವ್ಣ್ಡಿಣ್ಯ (Kavndinya) 1857ರಲ್ಲಿ ಕೊಡಗಿನ ಪ್ರಸಿದ್ಧ ಬಿದಿರು ಬೆಳೆಯುವ ಪ್ರದೇಶವಾಗಿದ್ದ ಆನಂದಪುರದಲ್ಲಿ ಬೃಹತ್ ಗಾತ್ರದ ಕಾಫಿ ಎಸ್ಟೇಟ್ಗಳನ್ನು ನಿರ್ಮಿಸಿ ಒಂದು ಹೊಸ ಪರ್ವಕ್ಕೆ ನಾಂದಿ ಹಾಡುತ್ತಾರೆ.
ಇನ್ನೂ 1855ರಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ್ಕೆ ಕೊಡಗಿಗೆ ಬಂದಿದ್ದ ಜರ್ಮನ್ ಬೇಸಲ್ ಮಿಷನರಿಯ ರೆವರೆಂಡ್ ಮೋಯಿಂಗ್ಲಿಂಗ (Rev Moegling) ಇನ್ನೊಂದು ರೀತಿಯ ಪರ್ವಕ್ಕೆ ಮುನ್ನುಡಿ ಬರೆಯುತ್ತಾನೆ. ರೆವರೆಂಡ್ ಮೋಯಿಂಗ್ಲಿಂಗ ಕೊಡಗಿಗೆ ಬರುವ ಮೊದಲು ಕೆನರಾ ಪ್ರದೇಶಗಳಲ್ಲಿ ಕ್ರೈಸ್ತ ಧರ್ಮದ ಪ್ರಚಾರಕನಾಗಿ ಅಲ್ಲಿಯ ಸ್ಥಳೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿ, ಮಂಗಳೂರಿನಲ್ಲಿ ಶುರುವಾದ ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ” ಇದರ ಸಂಪಾದಕರಾಗಿ ಮಿಷನರಿಯ ಗುರಿಯನ್ನು ಸಾಧಿಸುವಲ್ಲಿ ಸಫಲನಾಗಿದ್ದ. ರೆವರೆಂಡ್ ಮೋಯಿಂಗ್ಲಿಂಗ ಕೊಡಗನ್ನು ಸುತ್ತುವಾಗ ಆನಂದಪುರದ ಸೋಮಯ್ಯ ಅವನ ಪ್ರಚಾರಕ್ಕೆ ಆಕರ್ಷಿತರಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಕೊಂಡು ಅಲಮಂಡಾ ಸೋಮಯ್ಯನಾಗಿ ಪರಿವರ್ತನೆ ಹೊಂದಿದ ಮೇಲೆ ಅವನ ಜಾಗದಲ್ಲಿ ರೆವರೆಂಡ್ ಮೋಯಿಂಗ್ಲಿಂಗ ಒಂದು ಸಣ್ಣ ಚರ್ಚ್ ಅನ್ನು ಕಟ್ಟುತ್ತಾನೆ. ಅಂದಿನ ಬ್ರಿಟೀಷ್ ಸರ್ಕಾರ ರೆವರೆಂಡ್ ಮೋಯಿಂಗ್ಲಿಂಗ ಅವರ ಧರ್ಮ ಪ್ರಚಾರಕ್ಕೆ ನೆರವಾಗಲು ಕೊಡಗಿನ ಆನಂದಪುರದ ಪರಿಸರದಲ್ಲಿ 97 ಎಕರೆ ಕಾಡನ್ನು ನೀಡುತ್ತದೆ, ಇಲ್ಲಿ ರೆವರೆಂಡ್ ಮೋಯಿಂಗ್ಲಿಂಗ 1859ರಲ್ಲಿ ಒಂದು ದೊಡ್ಡ ಚರ್ಚ್ ಮತ್ತು ಬಂಗಲೆಯನ್ನು ಕಟ್ಟಿಸುತ್ತಾನೆ ಮತ್ತು ಅವನ ಪ್ರಚಾರಕ್ಕೆ ಧನಸಹಾಯ ಒದಗಿಸಲು ಉಳಿದ ಜಾಗದಲ್ಲಿ ಬೃಹತ್ ಕಾಫಿ ತೋಟವನ್ನು ನಿರ್ಮಿಸುತ್ತಾನೆ, ಅಂದು ಈ ಬೆಳವಣಿಗೆ ಮಿಷನರಿಗಳು ಕೊಡಗಿನಲ್ಲಿ ಕಾಲೂರಲು ಸಹಾಯವಾಗುತ್ತದೆ.
ಇನ್ನೂ ಈ ಆನಂದಪುರದ ಕಾಫಿ ತೋಟದ ಬಂಗಲೆಯಲ್ಲಿ ಕಿಟೆಲ್ ಶಬ್ದಕೋಶದ ಜನಕ ಬೇಸಲ್ ಮಿಷನರಿಯ ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್ (Ferdinand Kittel) 1875ರಲ್ಲಿ ಇಲ್ಲಿ ತಂಗಿದ್ದು ಕೊಂಡು ಕೊಡಗಿನ ಪ್ರವಾಸ ಮತ್ತು ಅದ್ಯಯನ ಕೈಗೊಂಡಿದ್ದು ಇನ್ನೊಂದು ಪ್ರಮುಖ ಅಂಶ.
1854ರಲ್ಲಿ ಕೊಡಗಿನಲ್ಲಿ ಶುರುವಾದ ಬ್ರಿಟೀಷ್ ಬೆಂಬಲಿತ ಕಾಫಿ ಸಂಸ್ಕೃತಿ ಮತ್ತು ಅದರ ಆದಾಯಕ್ಕೆ ಮಾರುಹೋಗಿ, ಕೊಡಗಿನ ಹಲವಾರು ತರುಣರು ಕಾಫಿ ಬೆಳೆಯಲು ಪ್ರಾರಂಭಿಸುತ್ತಾರೆ. ಕೊಡವರ ಬೆನ್ನೆಲುಬು ಆಗಿದ್ದ “ಒಕ್ಕ” ಪದ್ದತಿಗೆ ಮಾರಕವಾಗಿದ್ದ ಈ ಕಾಫಿ ಸಂಸ್ಕೃತಿಗೆ ಉತ್ತೇಜನ ನೀಡಲು ಬ್ರಿಟೀಷ್ ಸರ್ಕಾರ ಕಂದಾಯ ನೀತಿಯಲ್ಲಿ ತಂದ ಬದಲಾವಣೆಗಳಿಂದ ನೋಡ ನೋಡುತ್ತಲೇ ಕೊಡಗಿನ ಪಾರಂಪರಿಕ ಜಮ್ಮ ಮತ್ತು ಬಾಣೆಯಲ್ಲಿ ಕಾಫಿ ಹೂವಿನ ಸುಗಂಧ ಬೀರಲು ಆರಂಭಿಸುತ್ತದೆ. ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಪಶ್ಚಿಮ ಘಟ್ಟಗಳಲ್ಲಿ ಇದ್ದ ನೈಸರ್ಗಿಕ ಮರಗಳನ್ನು ಕಟಾವು ಮಾಡಿ ಸುಮಾರು 70,000 ಎಕರೆ ಪ್ರದೇಶದಲ್ಲಿ ಆಂಗ್ಲರು ಮತ್ತು ಸ್ಥಳೀಯರು ದೊಡ್ಡ ದೊಡ್ಡ ಪ್ರಮಾಣದಲ್ಲಿ ಕಾಫಿ ತೋಟವನ್ನು ನಿರ್ಮಿಸುತ್ತಾರೆ. ಅರ್ನಾಲ್ಡ್ ವ್ರೈಟ್ (Arnold Wright) ಎಂಬ ವಿದೇಶಿ ಪ್ರವಾಸಿಗ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಕೊಡಗಿಗೆ ಬಂದಾಗ ಸರಿಸುಮಾರು ಎಂಭತ್ತು ಕಾಫಿ ಎಸ್ಟೇಟ್ಗಳು ಕಾರ್ಯನಿರ್ವಹಿಸುತ್ತಿದ್ದು ಇದರ ಮಾಲೀಕರು ಎಲ್ಲರೂ ಜೊತೆಗೂಡಿ “ಕೂರ್ಗ್ ಪ್ಲಾಂಟ್ರಸ್ ಅಸೋಸಿಯೇಷನ್” ಎಂಬ ಒಕ್ಕೂಟವನ್ನು ಸ್ಥಾಪಿಸಿರುತ್ತಾರೆ.
ಇನ್ನೂ ನಾವುಗಳು ಹೇಳಿದ ಹಾಗೆ ಬ್ರಿಟೀಷರ ಆಗಮನಕ್ಕಿಂತ ಮುಂಚೆಯೇ ಕೊಡಗಿನಲ್ಲಿ ಕಾಫಿ ವ್ಯವಸಾಯ ನಿರ್ದಿಷ್ಟ ಪ್ರದೇಶದಲ್ಲಿ ಮತ್ತು ಅಲ್ಪ ಪ್ರಮಾಣದಲ್ಲಿ ಮಾಡುತ್ತಿದ್ದರು ಎಂದು ಹೇಳಿರುವ ಅರ್ನಾಲ್ಡ್ ವ್ರೈಟ್ ಈ ರೀತಿ ಅದನ್ನು ದಾಖಲಿಸಿದ್ದಾರೆ – Coffee had been grown upon small plots of land for a number of years; in fact, during the rule of the rajahs it was not unknown, although those individuals who had a few plants lived in continual dread of those disasters which had befallen the plants in other districts. ಇದಕ್ಕೆ ಪುಷ್ಠಿ ನೀಡುವಂತೆ ರಾಬರ್ಟ್ ಎಚ್ ಈಲಿಯೋಟ್ (Robert H Elliot) ಅವರು ಕೊಡಗಿಗೆ ಭೇಟಿ ನೀಡಿದಾಗ ಅಲ್ಲಿನ ಕಾಫಿ ಬೆಳೆಗಾರರು ಮತ್ತು ಸ್ಥಳೀಯರಿಂದ ಪಡೆದ ಮಾಹಿತಿಯ ಪ್ರಕಾರ ಆಂಗ್ಲರು ಕೊಡಗಿಗೆ ಬರುವ ಮುಂಚೆಯೇ ಕೊಡಗಿನ ನಾಲ್ಕೂನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಫಿಯ ತೋಟಗಳು ಇರುವ ಬಗ್ಗೆ ದಾಖಲಿಸಿದ್ದಾರೆ.
ಇನ್ನೂ ವಿದೇಶದಲ್ಲಿ ಕಾಫಿ ಬೇಡಿಕೆ ಹೆಚ್ಚಾದಾಗ ಕೊಡಗಿನಲ್ಲಿ ಅಣಬೆಗಳ ರೀತಿಯಲ್ಲಿ ಕಾಫಿ ತೋಟಗಳು ತಲೆ ಎತ್ತಲು ಪ್ರಾರಂಭಿಸುತ್ತದೆ, ಅಂದಿನ ಕಾಲದಲ್ಲಿ ಪ್ರಮುಖ ಕಾಫಿ ಎಸ್ಟೇಟ್ಗಳ ಹೆಸರು ಈ ಕೆಳಕಂಡಂತೆ ಇರುತ್ತದೆ,
ಅಬಿಯಲ್ (Abial), ಅತ್ತೂರು (Attur), ಐನ್ಸ್ಲೀಸ್ ಎಸ್ಟೇಟ್ (Ainslie’s Estate), ಭಜೀಕೊಳ್ಳಿ (Bajeecollie), ಬೆಳ್ಳಾರಿಮೊಟ್ಟಿ (Bellarimotti), ಬಿಳಿಕೇರಿ (Bilikeri), ಸೋಮವಾರಪೇಟೆಯ ಚನ್ನಬಸಪ್ಪ ಎಸ್ಟೇಟ್ (D. Channabasappa), ಕ್ಯಾಂಪ್ ಬೆಲ್ (Campbell Estate), ಕ್ಲೋಸ್ಬರ್ನ್ (Closeburn), ಕೂರ್ಗ್ ಕಾಫಿ ಎಸ್ಟೇಟ್ ಕಂಪನಿ ಲಿಮಿಟೆಡ್ (Coorg Coffee Estate Company, Ltd), ಕೋಟಾಕಾಡು (Cota Cadoo), ಕೌರಿಬೆಟ್ಟ (Cowribetta), ಕೌಕೂಡಿ (Cowcoody), ಚೌಹಳ್ಳಿ (Chowhully), ಕುಲ್ಲಲ್ಲಿ (Cullaly), ಹೀಲ್ ಗ್ರೋವ್ (Hill Grove), ಐಗೂರು (Igoor), ದೇವರ ಕಾಡು (Deverah Cadoo), ಎಲಿಜಾ ಅಂಡ್ ಫಲೆಥೋಡು (Eliza and Palethodu), ದಿ ಇಲ್ಕ್ ಹಿಲ್ ಕಾಫಿ ಎಸ್ಟೇಟ್ ಲಿಮಿಟೆಡ್ (The Elk Hill Coffee Estate, Ltd), ಹಂಚಿ ಬೆಟ್ಟ ಅಂಡ್ ಕೌರಿ ಕಾಡು (Hanchi Betta And Cowri Kadu), ಹೋಪ್ (Hope), ಹೆರೂರು (Heroor), ಜಂಬೂರ್ (Jumbur), ಕಣಕಾಡು (Kana Kadu), ದಿ ಕರಿ ಕೊಳ್ಳಿ ಕಾಫಿ ಎಸ್ಟೇಟ್ ಕಂಪನಿ ಲಿಮಿಟೆಡ್ (The Kari Kolli Coffee Estate Company, Ltd), ಕಿಬ್ರೀಬೆಟ್ಟ (Kibribetta), ಕಿತೇರ್ಹಳ್ಳಿ (Kitherhalli), ಕೂರ್ಗ್ ಹಳ್ಳಿ (Koorg Hully), ಕೆಡುಕಲ್ಲ್ (Kedukal), ಮರಕೇರ ಎಸ್ಟೇಟ್ (Mercara Estate), ಮಾಂಗ್ಲೆಸ್ ಬ್ರದರ್ಸ್ ಎಸ್ಟೇಟ್ (Mangles Brothers), ರಾವ್ ಬಹದ್ದೂರ್ ಸಿ. ಎಮ್. ನಂಜಪ್ಪ ಅವರ ಕೊರ್ತಿಕಾಡ್ (Korthicad) ಮತ್ತು ಕೃಷ್ಣ ಎಸ್ಟೇಟ್ (Krishna), ಮೈಲತ್ಪುರ್ (Mylatpur), ಫೈತ್ (Faith), ವಾಟೆಕುಡು (Watekudu), ಗುಣಿಕಾಡು (Gunikadu), ಪೇರೆಮ್ಬೂಕೊಳ್ಳಿ (Peremboocolly), ಸ್ಯಾಂಡಲ್ವುಡ್ (Sandalwood), ಸಿದ್ದಾಪುರ್ (Sidapur), ಸುಂಟಿಕೊಪ್ಪ (Suntikoppa), ವಾಡ್ಡೋನ್ (Whaddon), ವುಳೀಗೂಲಿ (Wooligooly), ವಸ್ನುಲ್ಲಾಗೋತ್ತಾಯ್ (Wosnullagottay), ದಿ ಯಮ್ಮಗುಗುಡಿ ಎಸ್ಟೇಟ್ ಕಂಪನಿ ಲಿಮಿಟೆಡ್ (The Yemmagugoodi Estates Company, Ltd), ಪೋಲ್ಲಿಬೆತ್ತ (Pollibetta), ಘಟ್ಟದ ಹುಲ್ಲಾ (Ghatad Hulla), ಸಿಲ್ಪಿ (Silpi), ಡಾಲ್ಕೂರ್ರೇನ್ (Dalqurren), ಕಬ್ಬಿಣ ಕಾಡ್ (Kabinkad), ನೆಲ್ಲಿಕೆರೆ (Nellikere), ಶಾಂತಗೇರಿ (Santagherry), ಬುಟ್ಟಿಕೆರಿ ಅಂಡ್ ಕೊಡರಹಳ್ಳಿ (Buttikeri & Kodagarahalli), ಚೆಟ್ಟಳ್ಳಿ (Chettali), ಬಿಳಿಗೆರಿ ಅಂಡ್ ಫನ್ನ್ಯ (Billigeri & Pannya), ಕೂವರ್ಕೊಳ್ಳಿ ಗ್ರೂಪ್ (Coovercolly Group), ಕುಸ್ಬರ್ (Kusbur), ಚೌಡಿಕಾಡು (Choudicadoo), ಫೇರ್ ಲ್ಯಾಂಡ್ಸ್ ಅಂಡ್ ಓಕ್ ಲ್ಯಾಂಡ್ಸ್ ಎಸ್ಟೇಟ್ (Fairlands & Oaklands Estate), ತೂಬೇನ್ ಕೊಳ್ಳಿ (Toobenkolly), ಬನನ್ನಗಳ (Banangala).
1854ರಲ್ಲಿ ಕಾಫಿ ವ್ಯವಸಾಯ ಶುರುಮಾಡಿದಾಗ “ಕಾಫಿ ಅರೆಬಿಕ” (Coffee Arabica) ಅನ್ನು ಕೊಡಗಿನಲ್ಲಿ ಬೆಳೆಸುತ್ತಿದ್ದು ಅದಕ್ಕೆ ಸ್ಥಳೀಯ ಹೆಸರಿನಿಂದ ನಾಮಕರಣ ಮಾಡಿ ಕರೆಯಲ್ಪಡುತ್ತಿದ್ದು ಎಲ್ಲವೂ ಒಂದೇ ಜಾತಿಗೆ ಸೇರಿದ್ದಾಗಿತ್ತು.
ಕಾಫಿಯ ಪರ್ವಗಿಂತ ಮುಂಚೆ ಹಲವಾರು ಬಗೆಬಗೆಯ ಭತ್ತದ ತಳಿಗಳ ಬೀಡಾಗಿ, ದೇಶ ಮತ್ತು ವಿದೇಶದಲ್ಲಿ ಅಕ್ಕಿ ಬಟ್ಟಲು ಎಂದು ಪ್ರಖ್ಯಾತಗಳಿಸಿದ್ದ ಕೊಡಗು ಹತ್ತೊಂಬತ್ತನೆಯ ಶತಮಾನದ ಕೊನೆಯ ಘಟ್ಟದಲ್ಲಿ ಕಾಫಿಯ ಬಟ್ಟಲಾಗಿ ಪರಿವರ್ತಿಸುತ್ತದೆ. ಬ್ರಿಟೀಷ್ ದಾಖಲಾತಿಗಳ ಪ್ರಕಾರ 1857ರಲ್ಲಿ 579 ಟನ್ ಕಾಫಿಯನ್ನು ವಿದೇಶಕ್ಕೆ ರಪ್ತು ಮಾಡಲಾಗಿದ್ದು ಕೆಲವೇ ವರ್ಷಗಳಲ್ಲಿ ಅಂದರೆ 1867ರಲ್ಲಿ 3000 ಟನ್ ಅಷ್ಟು ಕಾಫಿ ರಪ್ತು ಆದರೆ, 1876ರಲ್ಲಿ 4880 ಟನ್ ಅಷ್ಟು ಕಾಫಿ ಇಂಗ್ಲೆಂಡ್ ಮತ್ತು ಪ್ರೆಂಚ್ ಮಾರುಕಟ್ಟೆಗೆ ರಪ್ತು ಮಾಡಲಾಗುತ್ತದೆ. ಈ ಹಿಂದೆ ಕೊಡಗಿನಲ್ಲಿ ಬೆಳೆಯುತ್ತಿದ್ದ ಭತ್ತ, ಏಲಕ್ಕಿ ಮತ್ತು ಕಾಳುಮೆಣಸು ವ್ಯವಸಾಯಕ್ಕೆ ಕೊಡಗಿನಲ್ಲಿ ಉಪಲಭ್ಯವಿದ್ದ ಕಾರ್ಮಿಕರೆ ಸಾಕಿತ್ತು ಆದರೆ ಕಾಫಿಯ ತೋಟಗಳ ನಿರ್ವಹಣೆಗಾಗಿ ಬೇಕಿದ್ದ ಕಾರ್ಮಿಕರ ಸಂಖ್ಯೆ ಕೊಡಗಿನಲ್ಲಿ ಇಲ್ಲದ ಕಾರಣ ಎಸ್ಟೇಟ್ ಮಾಲೀಕರು ವಲಸೆ ಕಾರ್ಮಿಕರ ಮೊರೆ ಹೋಗಬೇಕಾಗುತ್ತದೆ.
ಇನ್ನೂ ಇಂದಿನ ದಿನಗಳಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡಲು ದೂರದ ಈಶಾನ್ಯ ಭಾರತ, ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರನ್ನು ತರುವ ಎಸ್ಟೇಟ್ ಮಾಲೀಕರು ಅಂದಿನ ಕಾಲದಲ್ಲಿ ಕೊಡಗಿನ ನೆರೆಯ ಪ್ರದೇಶವಾದ ಹಳೆ ಮೈಸೂರು, ಕೆನರಾ ಮತ್ತು ಮಲಬಾರ್ ಸೀಮೆಯಿಂದ ಕಾರ್ಮಿಕರನ್ನು ತರುತ್ತಿದ್ದರು. ಕಾಫಿಯ ಪರ್ವ ಶುರುವಾಗುವ ಮುಂಚೆ ಇದ್ದ ಕೊಡಗಿನ ಜನಸಂಖ್ಯೆ ಇಪ್ಪತ್ತೈದು ವರ್ಷಗಳಲ್ಲಿ ಇಮ್ಮಡಿ ಗೊಳ್ಳುತ್ತದೆ, ಇದಕ್ಕೆ ಮೂಲ ಕೊಡಗಿನವರಲ್ಲಿ ಮಕ್ಕಳ ಜನನ ಸಂಖ್ಯೆಗೆ ಸಂಬಂಧ ಹೊಂದಿರದೆ ಇದಕ್ಕೆ ಪ್ರಮುಖ ಕಾರಣ ಕೊಡಗಿನ ನೆರೆ ರಾಜ್ಯದ ವಲಸೆ ಕಾರ್ಮಿಕರು.
ಇನ್ನೂ ಈ ವಲಸೆ ಕಾರ್ಮಿಕರು ಐದು ತಿಂಗಳುಗಳಿಗೆ ಮಾತ್ರ ಕೊಡಗಿಗೆ ಬಂದು ತದನಂತರ ತಮ್ಮ ರಾಜ್ಯಕ್ಕೆ ಮರಳಿ ಹೋಗುತ್ತಿದ್ದು, ಕಾಲಕ್ರಮೇಣ ಇವರಲ್ಲಿ ಕೆಲವರು ಕೊಡಗಿನಲ್ಲೇ ನೆಲೆಸಲು ಮುಂದಾಗುತ್ತಾರೆ. ಇದರ ಮಧ್ಯೆ ವಂಶಪಾರಂಪರ್ಯವಾಗಿ ಬಂದ ಜಮ್ಮ ಅಧಿಕಾರವನ್ನು ಅನುಭವಿಸುತ್ತಿದ್ದ ಮೂಲ ಕೊಡವರಿಗೆ ಬ್ರಿಟೀಷ್ ಸರ್ಕಾರದ ಕೆಲವು ನೀತಿಗಳು ಮಾರಕವಾಗುತ್ತದೆ. ಹಿಂದಿನ ಕೊಡಗಿನ ರಾಜರು ಯುದ್ಧದಲ್ಲಿ ಸಾಹಸ ಪ್ರದರ್ಶಿಸಿದ ಕೊಡವ ಯೋಧರಿಗೆ ನೀಡುತ್ತಿದ್ದ ಜಮ್ಮ ಅಧಿಕಾರವನ್ನು ಬ್ರಿಟೀಷರು ತಮ್ಮ ಹಿತಕ್ಕಾಗಿ ಅಳವಡಿಸಿ ಕೊಳ್ಳುತ್ತಾರೆ. 1837ರಲ್ಲಿ ಕೊಡಗು ಮತ್ತು ಕೆನರಾ ದಂಗೆ ಮತ್ತು 1857ರಲ್ಲಿ ಸಿಪಾಯಿ ದಂಗೆಯನ್ನು ಬಗ್ಗುಬಡಿಯಲು ಬ್ರಿಟೀಷರ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಹಳೆ ಮೈಸೂರಿನ ಒಕ್ಕಲಿಗರು, ಮೊಪಿಲ್ಲಾಗಳು ಮತ್ತು ಮಲಬಾರಿನ ಮಲಯಾಳಿಗಳಿಗೆ ಕೊಡಗಿನಲ್ಲಿ ಜಮ್ಮ ಅಧಿಕಾರವನ್ನು ನೀಡಿ ಅವರುಗಳು ಕೊಡಗಿನಲ್ಲಿ ನೆಲೆ ಊರಲು ಬ್ರಿಟೀಷರು ಸಹಕರಿಸುತ್ತಾರೆ.
ಕೊಡಗಿನ ಹಿಂದಿನ ರಾಜರು ಜಮ್ಮ ಅಧಿಕಾರವನ್ನು ಕುಟುಂಬಕ್ಕೆ ನೀಡಿದರೆ, ಬ್ರಿಟೀಷರು ಅದನ್ನು (1834 – 1895) ನೇರವಾಗಿ ವ್ಯಕ್ತಿಗಳಿಗೆ ನೀಡುತ್ತದೆ. ಕೊಡಗಿನಲ್ಲಿ ಕಾಫಿ ಎಸ್ಟೇಟ್ ಗಳಲ್ಲಿ ಪ್ರತಿ ವರ್ಷ ನವೆಂಬರಿನಲ್ಲಿ ಪ್ರಾರಂಭವಾಗುವ ಚಟುವಟಿಕೆಗಳು ಮುಂದಿನ ವರ್ಷದ ಮಾರ್ಚ್ ವರೆಗೂ ನಡೆಯುತ್ತಿತ್ತು. ಇನ್ನೂ ಮಲೆನಾಡಿನ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಆಂಗ್ಲರು ಪ್ರತಿ ವರ್ಷ ಮಳೆಗಾಲದಲ್ಲಿ ತಮ್ಮ ನಿವಾಸವನ್ನು ಕೊಡಗಿನಿಂದ ಮೈಸೂರು ಅಥವಾ ಬೆಂಗಳೂರಿಗೆ ವರ್ಗಾಯಿಸುತ್ತಿದ್ದರು. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದ ಕಾಫಿ ಉದ್ಯಮಕ್ಕೆ ಮೊದಲಬಾರಿಗೆ 1870 ಮತ್ತು 1871ರಲ್ಲಿ ಕೀಟಗಳಿಂದ (Borer and Bugs) ಸಾಕಷ್ಟು ಹಾನಿ ಉಂಟಾಗುತ್ತದೆ, ಇದರಿಂದ ದೊಡ್ಡ ಎಸ್ಟೇಟ್ ಮಾಲೀಕರು ಚೇತರಿಸಿಕೊಂಡರೆ ಸಣ್ಣಪುಟ್ಟ ಎಸ್ಟೇಟ್ ಹೊಂದಿದ್ದವರು ಅತೀವ ಕಷ್ಟ ಪಡುತ್ತಾರೆ. ತಾತ್ಕಾಲಿಕವಾಗಿದ್ದ ಈ ನಷ್ಟ ಮುಂದಿನ ದಿನಗಳಲ್ಲಿ ಅಂದರೆ 1878ರಿಂದ 1883ರ ವರೆಗಿನ ಅವಧಿಯಲ್ಲಿ ಕೊಡಗಿನ ಕಾಫಿಗೆ ವಿದೇಶಿ ಮಾರುಕಟ್ಟೆಯಲ್ಲಿ ಸಿಕ್ಕ ಅತ್ಯುತ್ತಮ ದರ ಹಾಗೂ ಬೇಡಿಕೆಯಿಂದ ಆ ಐದು ವರ್ಷಗಳು ಕೊಡಗಿನವರ ಪಾಲಿಗೆ ಸುವರ್ಣ ಅವಧಿಯಾಗಿತ್ತು.
1871ರ ಸಂಕಷ್ಟದ ದಿನಗಳ ನಂತರದಲ್ಲಿ ಮೊಟ್ಟಮೊದಲ ಬಾರಿಗೆ ಕೊಡಗಿನ ನೈಸರ್ಗಿಕ ಬಿದರಿಗೆ ಪ್ರಸಿದ್ಧ ಹೊಂದಿದ್ದ ಆನಂದಪುರದ ಪರಿಸರದಲ್ಲಿ “ಶೇಡ್ ಕಾಫಿ” (Shade Coffee) ಅನ್ನು ಬೆಳೆಸಲು ಪ್ರಾರಂಭಿಸುತ್ತಾರೆ. ಈ ಪದ್ದತಿಯಲ್ಲಿ ಸ್ಥಳೀಯ ಕಾಡು ಜಾತಿಯ ಮರಗಳ ನೆರಳಿನಲ್ಲಿ ಕಾಫಿಯನ್ನು ಬೆಳೆಸಲಾಗುತ್ತಿತ್ತು, ಇನ್ನೂ ಕೆಲವು ಆಂಗ್ಲರು ಕಾಫಿ ತೋಟದ ನಿರ್ಮಾಣದ ತವಕದಲ್ಲಿ ಕಾಡನ್ನು ಸಂಪೂರ್ಣ ಬಯಲು ಮಾಡಿದ್ದರಿಂದ ಅವರ ನೆರವಿಗೆ ಅಂದಿನ ಕಾಲದಲ್ಲೇ ದೂರದ ಆಸ್ಟ್ರೇಲಿಯಾದಿಂದ ಸಿಲ್ವರ್ ಓಕ್ (Silver Oak – Grevillea Robusta) ಜಾತಿಯ ಮರಗಳನ್ನು ಆಮದು ಮಾಡಿಕೊಂಡು ಕಾಫಿ ತೋಟಗಳಲ್ಲಿ ಬೆಳೆಸಲು ಪ್ರಾರಂಭಿಸುತ್ತಾರೆ. ಕಾಲಕ್ರಮೇಣ ಕೊಡಗಿನಲ್ಲಿ ಬೆಳೆಯುವ ಕಾಫಿಗೆ “ಕೂರ್ಗ್ ಕಾಫಿ” ಮತ್ತು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಬೆಳೆಯುವ ಕಾಫಿಗೆ “ಮಂಜರಬಾದ ಕಾಫಿ” ಎಂದು ಸ್ಥಳೀಯವಾಗಿ ಕರೆಯಲ್ಪಡುತ್ತಿತ್ತು. ಇನ್ನೂ ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಬ್ರೆಜಿಲ್ ಕಾಫಿ ವಿದೇಶಿ ಮಾರುಕಟ್ಟೆಯನ್ನು ಆವರಿಸಿಕೊಂಡ ಮೇಲೆ ಸ್ವಾಭಾವಿಕವಾಗಿ ಕೊಡಗಿನ ಕಾಫಿಯ ಬೆಳೆಯಲ್ಲಿ ಶೇಕಡ 40 ರಷ್ಟು ಇಳಿಜಾರು ಕಾಣಿಸುತ್ತದೆ, ಇದರ ಪರಿಣಾಮವಾಗಿ ಕೆಲವು ಸ್ಥಳೀಯರು ಕಾಫಿ ಉದ್ಯಮದಲ್ಲಿ ನಷ್ಟ ಅನುಭವಿಸಿದರೆ ಇನ್ನೂ ಕೆಲವು ಆಂಗ್ಲರು ತಮ್ಮ ಕಾಫಿ ಎಸ್ಟೇಟ್ಗಳಲ್ಲಿ ಬೆಳೆಸುವ ಕಾಫಿಯನ್ನು ಅರ್ಧದಷ್ಟು ಕಡಿತಗೊಳಿಸುತ್ತಾರೆ. ಅಂತು ಇಂತು ಕೊಡಗು ಸಹಿತವಾಗಿ ಭಾರತದ ಕಾಫಿ ಇಪ್ಪತ್ತನೆಯ ಶತಮಾನದ ಹೊಸಿಲಲ್ಲಿ ಅಂದರೆ 1910ರಲ್ಲಿ 34,984,000 lb (ಪೌಂಡ್) ಗಳಷ್ಟು ಕಾಫಿಯನ್ನು ವಿದೇಶಕ್ಕೆ ರಪ್ತು ಮಾಡುತ್ತದೆ, ಇನ್ನೊಂದು ಕಡೆ ಕೊಡಗಿನಲ್ಲಿ ಭಾಗಷಃ ಎಲ್ಲರೂ ಸಣ್ಣ ಅಥವಾ ದೊಡ್ಡ ಪ್ರಮಾಣದ ಕಾಫಿ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇನ್ನೂ ಅಂದಿನ ಬ್ರಿಟೀಷರ ದಾಖಲಾತಿಯ ಪ್ರಕಾರ ಸ್ಥಳೀಯರ ಎಸ್ಟೇಟ್ಗಳಲ್ಲಿ ಎಕರೆ ಒಂದಕ್ಕೆ 1cwt ಅಷ್ಟು ಕಾಫಿ ಇಳುವರಿ ಇದ್ದರೆ, ಐರೋಪ್ಯರ ಎಸ್ಟೇಟ್ಗಳಲ್ಲಿ ಕಾಫಿಯ ಇಳುವರಿ ಎಕರೆ ಒಂದಕ್ಕೆ ಸುಮಾರು 3cwt ಇಂದ 5cwt ರಷ್ಟು ಇದ್ದು, ಇನ್ನೂ ಕೆಲವು ಆಂಗ್ಲರು ಕೆಲವು ಪ್ರತಿಕೂಲವಾದ ಹವಾಮಾನದಲ್ಲಿ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ವೈಜ್ಞಾನಿಕ ಆಧಾರದ ಮೇಲೆ ಕಾಫಿಯ ವ್ಯವಸಾಯದ ಪರಿಣಾಮವಾಗಿ ಎಕರೆ ಒಂದಕ್ಕೆ ಸರಿಸುಮಾರು 10cwt ಇಂದ 12cwt ರಷ್ಟು ಇಳುವರಿಯನ್ನು ಸಾಧಿಸಿರುವ ಬಗ್ಗೆ ಉಲ್ಲೇಖವಿರುತ್ತದೆ.
ಈ ರೀತಿಯ ಏರಿಳಿತಗಳ ಮಧ್ಯದಲ್ಲಿ ಅರಳಿದ ಕಾಫಿ ಹೂವು, ಇಪ್ಪತ್ತನೆಯ ಶತಮಾನದಲ್ಲಿ ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತದೆ, ಪ್ರಥಮ ಮತ್ತು ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಕಾಫಿಯನ್ನು ರಪ್ತು ಮಾಡಲು ಸಾಧ್ಯವಾಗದೆ ಮತ್ತು ವಿದೇಶದಲ್ಲಿ ಕಾಫಿಯ ಅತಿದೊಡ್ಡ ಮಾರುಕಟ್ಟೆಯಾಗಿದ್ದ ಪ್ರೆಂಚ್ ಮಾರುಕಟ್ಟೆ ಬಿದ್ದಾಗ, ಅದರ ಕಂಪನ ಕೊಡಗಿನಲ್ಲು ಸಹಾ ಕಂಡುಬರುತ್ತದೆ. 1913ರಲ್ಲಿ ಮೈಸೂರ್ ರಾಜ್ಯದ ಪ್ರಥಮ ಕೃಷಿ ನಿರ್ದೇಶಕರಾಗಿದ್ದ ಡಾ ಲೆಸ್ಲಿ. ಸಿ. ಕೋಲ್ಮನ್, ತಮ್ಮ ಅಧಿಕಾರ ಅವಧಿಯಲ್ಲಿ (1913 to 1934) ಕಾಫಿ ಬಗ್ಗೆ ಸಂಶೋಧನೆ ನಡೆಸಲು 1925ರಲ್ಲಿ ಬಾಳೆಹೊನ್ನೂರು ಮತ್ತು ಮಡಿಕೇರಿಯಲ್ಲಿ “ಸೆಂಟ್ರಲ್ ಕಾಫಿ ರಿಸರ್ಚ್ ಸ್ಟೇಷನ್” ಅನ್ನು ಸ್ಥಾಪಿಸುತ್ತಾರೆ. ಇನ್ನೂ ಇವುಗಳ ಮಧ್ಯದಲ್ಲಿ ಅಂದಿನ ಕಾಲದ ಮೂಲ ಕೊಡಗಿನ ಕೆಲವು ಕಾಫಿ ಬೆಳೆಗಾರರು “ಕಾಫಿ ಸಂಸ್ಕೃತಿಯ” ಹೆಸರಿನಲ್ಲಿ ಆಂಗ್ಲರ ಸಂಸ್ಕೃತಿ, ಭಾಷೆ, ವೇಷಭೂಷಣ, ಆಹಾರ ಪದ್ದತಿ ಮತ್ತು ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ, ಇದು ಎಷ್ಟರಮಟ್ಟಿಗೆ ಎಂದರೆ ಬ್ರಿಟೀಷರ ತರಹವೇ ಇವರು ಸಹಾ ಮಳೆಗಾಲದಲ್ಲಿ ತಮ್ಮ ನಿವಾಸಗಳನ್ನು ಮೈಸೂರು ಮತ್ತು ಬೆಂಗಳೂರಿಗೆ ಸ್ಥಳಾಂತರಿಸುತ್ತಿದ್ದರು.
ಇನ್ನೂ ಕೊಡಗಿಗೆ ಹೊರಗಿನಿಂದ ಬಂದು ನೆಲೆಸಿರುವರು ಸ್ಥಳೀಯ ಮೂಲ ಕೊಡವ ಮತ್ತು ಅವರ ಸಂಸ್ಕೃತಿ, ಪರಂಪರೆ, ಉಡುಪುಗಳು ಮತ್ತು ಇತರೆ ಪದ್ದತಿಗಳನ್ನು ಅನುಕರಿಸಲು ಪ್ರಾರಂಭಿಸುತ್ತಾರೆ. ಈ ಎಲ್ಲಾ ವಿದ್ಯಮಾನಗಳ ಮದ್ಯದಲ್ಲಿ ಇಂದು ಭಾರತದಲ್ಲಿ ಹಲವಾರು ಬಗೆಯ ಕಾಫಿಯನ್ನು ಬೆಳೆಯಲಾಗುತ್ತಿದ್ದರು, ಕಾಫಿಯ ಇಂದಿನ ರುಚಿಯ ಹಿಂದಿರುವ ಮೂಲ ಮಲೆನಾಡಿಗರು ಮತ್ತು ಹದಿನೇಳನೆಯ ಶತಮಾನದಲ್ಲಿ ನಮ್ಮ ಕರ್ನಾಟಕ ರಾಜ್ಯದ ಮೊದಲ ಕಾಫಿ ತೋಟ ಮತ್ತು ಸಂಶೋಧನಾ ಕೇಂದ್ರದ ಬಗ್ಗೆ ಯಾರಿಗೂ ತಿಳಿದಿರದಿಲ್ಲದ್ದು ನಿಜಕ್ಕೂ ಬೇಸರದ ಸಂಗತಿ.
ಅಂತಿಮವಾಗಿ ನಮಗೆ ಕಾಡುವ ಪ್ರಶ್ನೆ ಏನೆಂದರೆ ಚಹಾ ಪ್ರಿಯರಾದ ಬ್ರಿಟೀಷರು ಆದಾಯಕ್ಕಾಗಿ ನಮ್ಮ ಮಲೆನಾಡಿನ ಪರಿಸರವನ್ನು ಹಾಳು ಗೆಡವಿ ಕಾಫಿಯ ಸುಗಂಧವನ್ನು ಅರಳಿಸಿದ್ದರೆ ನಮ್ಮವರು ಯಾಕೆ ನಮ್ಮ ಮೂಲ ಸಂಸ್ಕೃತಿ, ಪರಂಪರೆ, ಆಚರಣೆ ಮತ್ತು ಬೆಳೆಗಳನ್ನು ಬದಿಗೊತ್ತಿ ಕಾಫಿಯ ಮೋಹಕ್ಕೆ ಆಕರ್ಷಿತರಾದರು ಎನ್ನವುದೇ “ಯಕ್ಷ ಪ್ರಶ್ನೆ”.
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Saakshatv Naavu kelada charitre episode6
-ಲೇಖನ ಮತ್ತು ಫೋಟೋಗಳು:
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರ, ಪರಿಸರ ಮತ್ತು ವನ್ಯಜೀವಿ ಹೋರಾಟಗಾರ
ಶಿವಮೊಗ್ಗ
ಇಥಿಯೋಪಿಯ ಇಂದ ಶಿವಮೊಗ್ಗದ ಮೂಲಕ ಕೊಡಗಿನವರೆಗೆ ಕಾಫಿಯ ಪಯಣ (ಭಾಗ-2):
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv