K.S. Eshwarappa | ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ
ಶಿವಮೊಗ್ಗ : ರಾಜ್ಯ ಬಿಜೆಪಿ ವತಿಯಿಂದ ಅ. ೩೦ ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅ. ೯ ರಂದು ಹುಬ್ಬಳ್ಳಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಹಿನ್ನಲೆಯಲ್ಲಿ ಪೂರ್ವಭಾವಿ ಪ್ರವಾಸವನ್ನು ಪಕ್ಷದ ಮುಖಂಡರು ಹಮ್ಮಿಕೊಂಡಿದ್ದು, ೫ ತಂಡ ರಚಿಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ ೨೨೪ ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು ೩ ಸಾವಿರ ಹಿಂದುಳಿದ ವರ್ಗದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅ. ೩೦ ರ ಕಲಬುರಗಿ ಸಮಾವೇಶದಲ್ಲಿ ಸುಮಾರು ೪ ಲಕ್ಷಕ್ಕೂ ಹೆಚ್ಚು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ತಂಡ ೧ ರಲ್ಲಿ ಕೆ.ಎಸ್. ಈಶ್ವರಪ್ಪ ನೇತೃತ್ವ ವಹಿಸಲಿದ್ದು, ಸೆ. ೨೭ ರಂದು ಶಿವಮೊಗ್ಗ, ಚಿಕ್ಕಮಗಳೂರು, ೩೦ ರಂದು ಚಾಮರಾಜನಗರ, ಅ. ೧ ರಂದು ಮಂಡ್ಯ, ಹಾಸನ, ೩ ರಂದು ಬೀದರ್ ನಲ್ಲಿ ಪ್ರವಾಸ ಕೈಗೊಳ್ಳುವರು ಎಂದರು.
೨ ನೇ ತಂಡದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಸೆ. ೨೭ ರಂದು ಮಂಗಳೂರು, ಉಡುಪಿ, ಅ. ೩ ರಂದು ರಾಯಚೂರು, ಯಾದಗಿರಿಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ೩ ನೇ ತಂಡದ ನೇತೃತ್ವವನ್ನು ಸಚವಿ ಕೋಟ ಶ್ರೀನಿವಾಸ ಪೂಜಾರಿ ವಹಿಸಲಿದ್ದು, ಸೆ. ೨೮ ರಂದು ಕೋಲಾರ, ಚಿಕ್ಕಬಳ್ಳಾಪುರ, ೨೯ ರಂದು ಬೆಂಗಳೂರು ಗ್ರಾಮಾಂತರ, ಉತ್ತರ, ದಕ್ಷಿಣ ಹಾಗೂ ರಾಮನಗರ ಪ್ರವಾಸ ಕೈಗೊಂಡಿದ್ದಾರೆ ಎಂದರು.

ತಂಡ ೪ ರ ನೇತೃತ್ವವನ್ನು ಸಚಿವ ಬೈರತಿ ಬಸವರಾಜ್ ವಹಿಸಲಿದ್ದು, ಅ. ೧ ರಂದು ಚಿತ್ರದುರ್ಗ, ದಾವಣಗೆರೆ, ಅ. ೨ ರಂದು ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ೩ ರಂದು ತುಮಕೂರು, ಮಧುಗಿರಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ೫ ನೇ ತಂಡದಲ್ಲಿ ಸಚಿವ ಆನಂದ್ ಸಿಂಗ್ ನೇತೃತ್ವ ವಹಿಸಲಿದ್ದು, ಅ. ೧ ರಂದು ವಿಜಯನಗರ, ಬಳ್ಳಾರಿ, ೩ ರಂದು ಬೆಳಗಾವಿ, ಚಿಕ್ಕೋಡಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ನವರು ಏನೂ ಮಾಡಿಲ್ಲ. ಖಾಲಿ ಡಬ್ಬ ಅಲುಗಾಡಿಸಿ ಶಬ್ಧ ಜಾಸ್ತಿ ಮಾಡಿದ್ದು ಬಿಟ್ಟರೆ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗದ ಸಮಾವೇಶ ಮಾಡದೇ ಸಿದ್ಧರಾಮೋತ್ಸವ ಮಾಡಿದ್ದಾರೆ. ಈಗಾಗಲೇ ಡಿಕೆಶಿ ಸರ್ವಾಧಿಕಾರಿ ಧೋರಣೆ ವಿರುದ್ಧ ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿಭಜನೆಯತ್ತ ಸಾಗಿದೆ. ಹಿಂದುಳಿದ ವರ್ಗದ ಬಗ್ಗೆ ಕಾಂತರಾಜ್ ವರದಿಯನ್ನು ೧೪೦ ಕೋಟಿ ರೂ. ವೆಚ್ಚದಲ್ಲಿ ತಯಾರಿಸಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಆ ವರದಿಗೆ ಮುಖ್ಯ ಕಾರ್ಯದರ್ಸಿ ಸಹಿಯನ್ನೇ ಹಾಕಿಲ್ಲ. ಮೂಗಿಗೆ ತುಪ್ಪ ಸವರಿ ಕಾಂಗ್ರೆಸ್ ನವರು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ. ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದು ೪ ವರ್ಷವಾದರೂ ಕಾಂತರಾಜ್ ವರದಿ ಏಕೆ ಮಂಡಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟದಲ್ಲಿ ಅನೇಕ ಜಾತಿ ಸಮುದಾಯಗಳು ಮೀಸಲಾತಿ ಕೇಳುತ್ತಿದ್ದಾರೆ. ಅದಕ್ಕಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಆದೇಶ ನೀಡಿದ್ದು, ಜಯಪ್ರಕಾಶ್ ಹೆಗ್ಗಡೆ ನೇತೃತ್ವದ ಸಮಿತಿ ಸಂಪೂರ್ಣ ವರದಿ ಕೊಟ್ಟ ನಂತರ ಜಾರಿ ಮಾಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು.