ಚಂದನವನದ ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ “ಪ್ರೊಡಕ್ಷನ್ ನಂ 1” ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ನಟಿಸುತ್ತಿದ್ದಾರೆ.
ದುನಿಯಾ ವಿಜಯ್ ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರಿಂದ ಈ ಚಿತ್ರ ಮೂಡಿ ಬರುತ್ತಿದೆ. ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.
ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯಾಗಿ ಬೃಂದಾ ನಟಿಸಲಿದ್ದಾರೆ. ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.