ಸುಪ್ರೀಂ ಎಚ್ಚರಿಕೆ – ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರೆ ರದ್ದು
ಉತ್ತರಪ್ರದೇಶ : ಉತ್ತರಖಂಡ ಸರ್ಕಾರವು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾವಿರಾರು ಜನರು ಗುಂಪುಗುಂಪಾಗಿ ಸೇರುವ ಕನ್ವರ್ ಯಾತ್ರೆಯನ್ನ ಮುನ್ನೆಚ್ಚರಿಕಾ ಕ್ರಮವಾಗಿ ರದ್ದುಗೊಳಿಸಿದೆ.. ಆದ್ರೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಾತ್ರ ಕನ್ವರ್ ಯಾತ್ರೆಗೆ ಅವಕಾಶ ನೀಡುವ ಮೂಲಕ ಕೋವಿಡ್ ಮೂರನೇ ಅಲೆಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಕೋರಲು ಹೊರಟಿತ್ತು.. ಅಂದ್ರೆ ಯಾತ್ರೆಗೆ ಅನುಮತಿ ನೀಡಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿತ್ತು..
ಆದದ್ರೆ ಕೋವಿಡ್ ಸಾಂಕ್ರಾಮಿಕದ ನಡುವೆ ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಿದ್ದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಯೋಗಿ ಸರ್ಕಾರದೊಂದಿಗೆ ಶನಿವಾರ ಕನ್ವರ್ ಸಂಘ ಸಮಾಲೋಚನೆ ನಡೆಸಿದ್ದು, ಉತ್ತರ ಪ್ರದೇಶದ ಈ ವರ್ಷದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಮಂಗಳವಾರ ಯುಪಿ ಸರ್ಕಾರವು, ಕನ್ವರ್ ಯಾತ್ರೆ ಶಿವನ ಹತ್ತಾರು ಭಕ್ತರು ಸೇರುವ ಕಾರ್ಯಕ್ರಮವು ಕನಿಷ್ಠ ಸಂಖ್ಯೆಯ ಜನರೊಂದಿಗೆ ನಡೆಸಬಹುದು. ಅಗತ್ಯವಿದ್ದರೆ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು ಎಂದು ಹೇಳಿತ್ತು.
ಉತ್ತರ ಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಂತವಾಗಿ ಕೈಗೆತ್ತಿಕೊಂಡಿದೆ. ಹಾಗೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ಕಳುಹಿಸಿತ್ತು. ಕೋವಿಡ್ ನಡುವೆ ಕನ್ವರ್ ಯಾತ್ರೆ ಯಾಕೆ ಎಂದು ಪ್ರಶ್ನಿಸಿತ್ತು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ಪೀಠವು ಈ ವರ್ಷ ರಾಜ್ಯದಲ್ಲಿ ವಾರ್ಷಿಕ ಕನ್ವರ್ ಯಾತ್ರೆಯನ್ನು ಸಾಂಕೇತಿಕ ಆಚರಣೆಗೆ ಅನುಮತಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿತ್ತು.
ಭಾರತೀಯ ಪ್ರಜೆಗಳ ಆರೋಗ್ಯ ಮತ್ತು ಜೀವಿಸುವ ಹಕ್ಕು ಎನ್ನುವುದು ಎಲ್ಲ ಧಾರ್ಮಿಕ ಹಾಗೂ ಇತರೆ ಮೂಲಭೂತ ಹಕ್ಕುಗಳಿಗಿಂತ ಅತ್ಯುನ್ನತವಾಗಿರುತ್ತದೆ, ಎಂದು ತಿಳಿಸಿತ್ತು. ಹಾಗೆಯೇ ಈ ಬಗ್ಗೆ ಜುಲೈ 19 ರೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಯಾತ್ರೆಗೆ ಅನುಮತಿ ರದ್ದುಗೊಳಿಸಿದೆ.