ಬೆಳಗಾವಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಎಲ್ಲ ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ (BJP Government) ಮೊಟ್ಟೆಯಲ್ಲೂ ಮೋಸ ಮಾಡುವುದನ್ನು ಬಿಟ್ಟಿಲ್ಲ. ಗುತ್ತಿದಾರರ ಸಂಘದವರು ಪತ್ರ ಬರೆದರೂ ಪ್ರಧಾನಿ ಮೋದಿಯಿಂದ ಉತ್ತರ ಬರಲಿಲ್ಲ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಮೊಟ್ಟೆಯಲ್ಲಿಯೂ ಕಾಸು ಮಾಡುವುದನ್ನು ಬಿಟ್ಟಿಲ್ಲ. ಈ ರಾಜ್ಯದಲ್ಲಿ ಅರಣ್ಯ ಸಂಪತ್ತು, ಖನಿಜ ಸಂಪತ್ತು ಇದೆ. ಇಲ್ಲಿನ ಯುವಕರು ಶಿಕ್ಷಿತರಿದ್ದು ಅವರ ಭವಿಷ್ಯ ಉತ್ತಮವಾಗಿದೆ. ಇಡೀ ವಿಶ್ವದಲ್ಲೇ ಬೆಂಗಳೂರು ಸುಪ್ರಸಿದ್ಧವಾಗಿದೆ, ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ನಾನು ವಿದೇಶಕ್ಕೆ ಹೋದಾಗ ಕರ್ನಾಟಕದ ಯುವಕರು ಐಟಿಯಲ್ಲಿ ಕೆಲಸ ಮಾಡುವವರು ಸಿಕ್ಕಾಗ ಗರ್ವವಾಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚು ಹಣ ಸಂಪಾದಿಸಬೇಕೆಂದು ಆಸೆ ಇಟ್ಟುಕೊಂಡಿದ್ದ ಸರ್ಕಾರ ಕಳೆದ ಮೂರು ವರ್ಷಗಳ ಹಿಂದೆ ಶಾಸಕರನ್ನ ಖರೀದಿಸಿ ಅಧಿಕಾರಕ್ಕೆ ಬಂತು. ಆಂರಭದಲ್ಲೇ ನಿಯತ್ತಾಗಿರಲಿಲ್ಲ 40 ಪರ್ಸೆಂಟ್ ಸರ್ಕಾರ. ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದರು. ಜಿಎಸ್ ಟಿ ತಂದ ಜನರನ್ನು ಹಿಂಸಿಸಿದರು. ಸರ್ಕಾರಿ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದರು. ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಸರ್ಕಾರ 1.5 ಲಕ್ಷ ಕೋಟಿ ರೂ.ಗಳನ್ನ ಲೂಟಿ ಮಾಡಿದೆ ಎಂದು ಕಿಡಿ ಕಾರಿದ್ದಾರೆ.