ಮೇ 10ರ ಒಳಗೆ ರಾಜ್ಯದಲ್ಲಿ ಸಿಎಂ ಬದಲಾವಣೆ : ಯತ್ನಾಳ್
ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದು, ಈ ಮಧ್ಯೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಬಹುದು. ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ರಾಜ್ಯ ಹಾಗೂ ಪಾರ್ಟಿ ಹಿತದೃಷ್ಟಿಯಿಂದ ಪಕ್ಷ ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ. ನಿನ್ನೆ ದೆಹಲಿಯಲ್ಲಿ ಹೈಕಮಾಂಡ್ ಸಭೆ ನಡೆಸಲಾಗಿದೆ. ಅಂತಿಮ ತೀರ್ಮಾನವನ್ನು ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇನ್ನೂ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆಯಾದರೆ ಒಬ್ಬರಿಗೆ ಜೈಲಿಗೆ ಹೋಗುವ ಭಯವಿದ್ದು, ಇನ್ನೊಬ್ಬರಿಗೆ ಸಿಎಂ ಆಗಲ್ಲ ಎನ್ನುವ ಭಯ ಇದೆ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.
ಇಂದು ಸಿಎಂ ಶಾಸಕರಿಗೆ ಸಂಸದರಿಗೆ ಆಯೋಜಿಸಿದ ಔತಣಕೂಟಕ್ಕೆ ನಿನ್ನೆ ನನಗೆ ಸಿಎಂ ಕಚೇರಿಯಿಂದ ಕರೆ ಮಾಡಿ ಆಹ್ವಾನಿಸಲಾಗಿದೆ. ಆದರೆ ಇಂದು ಬಸವ ಜಯಂತಿ ಇದೆ. ಈ ಪವಿತ್ರ ದಿನದಂದು ವಿಜಯಪುರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೀಗಾಗಿ ನಾನು ಬೆಂಗಳೂರಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು.