Karnataka election 2023 | ರಾಜ್ಯಕ್ಕೆ ಅಮಿತ್ ಶಾ ಸರಣಿ ಭೇಟಿ – ಕಾಂಗ್ರೆಸ್ ಟ್ವೀಟ್ ವ್ಯಂಗ್ಯ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಸದ್ಯ ಮತಬೇಟೆಯಲ್ಲಿ ತೊಡಗಿಕೊಂಡಿವೆ. ಈ ನಡುವೆ ಆಡಳಿತರೂಢ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಮತ ಶಿಕಾರಿಯಲ್ಲಿ ತೊಡಗಿಕೊಂಡಿದೆ. ಅದರಲ್ಲೂ ಬಿಜೆಪಿಯ ಕೇಂದ್ರ ನಾಯಕರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಕುರಿತು ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷ, ಚುನಾವಣೆಗಾಗಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬರುತ್ತಿರುವ ಅಮಿತ್ ಶಾ ಅವರೇ, ಕೇಂದ್ರ, ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲೆಡೆಯೂ ನಿಮ್ಮದೇ ಸರ್ಕಾರವಿದ್ದರೂ ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸದೆ ಚುನಾವಣೆಗಾಗಿ ಬಣ್ಣದ ಕಾಗೆ ಹಾರಿಸುತ್ತಿರುವುದೇಕೆ? ಕನ್ನಡಿಗರ ಮತ ಬೇಕು, ಹಿತ ಬೇಡವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಕನ್ನಡಿಗರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ದೇಶದ ಗೃಹಸಚಿವರಾಗಿ ಕನ್ನಡಿಗರಿಗೆ ರಕ್ಷಣೆ ನೀಡಲಾಗದ ತಮ್ಮಿಂದ ಕನ್ನಡಿಗರಿಗೆ ಸಿಗುವುದಾದರೂ ಏನು? ಕರ್ನಾಟಕದ ಕಷ್ಟ ಕೇಳಲು ಬರದೆ, ಚುನಾವಣೆ ಪ್ರಚಾರಕ್ಕೆ ಬರುವ ಅಮಿತ್ ಶಾ ಅವರ ದ್ರೋಹ ಕನ್ನಡಿಗರಿಗೆ ನೆನಪಿದೆ.
ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರವು ಲುಂಗಿ ಡಾನ್ಸ್ ಮಾಡ್ತಿದ್ದರೂ ಕೇಂದ್ರ ನಾಯಕರು ತುಟಿ ಬಿಚ್ಚುವುದಿಲ್ಲವೇಕೆ?
ಪ್ರಧಾನಿಗೆ ಪತ್ರಗಳ ಮೇಲೆ ಪತ್ರ ಬರೆದರೂ ಸಣ್ಣ ಸ್ಪಂದನೆಯೂ ಇಲ್ಲವೇಕೆ?
ಬಿಜೆಪಿ ಹೈಕಮಾಂಡಿಗೆ ಕರ್ನಾಟಕ ಸಮೃದ್ಧವಾದ ಎಟಿಎಂ ಆಗಿದೆಯೇ?@AmitShah ಬಂದಿರುವುದು ಎಲಕ್ಷನ್ನಿಗಾ? 40% ಕಲೆಕ್ಷನ್ನಿಗಾ? pic.twitter.com/2VpVIQXLoj
— Karnataka Congress (@INCKarnataka) March 3, 2023
ನಿರಂತರವಾಗಿ ಗಡಿ ಕಲಹ ಸೃಷ್ಟಿಸುತ್ತಿದೆ ಮಹಾರಾಷ್ಟ್ರ. ಇತ್ತೀಚಿಗೆ ನಿಮ್ಮದೇ ಪಕ್ಷದ ದೇವೇಂದ್ರ ಫಡ್ನಿವಿಸ್ ಬೆಳಗಾವಿಯನ್ನು ಬಿಡುವುದಿಲ್ಲ ಎಂದಿದ್ದರು, ಈ ಬಗ್ಗೆ ಕರ್ನಾಟಕಕ್ಕೆ ತಾವು ಕೊಡುವ ಸ್ಪಷ್ಟನೆ ಏನು? ಒದಗಿಸುವ ನ್ಯಾಯವೇನು? ಮಹಾರಾಷ್ಟ್ರದ ಪರವೇ ಮಮಕಾರ ತೋರುವ ತಾವು ಯಾವ ನೈತಿಕತೆಯಲ್ಲಿ ಕರ್ನಾಟಕಕ್ಕೆ ಬಂದು ಮತ ಕೇಳುವಿರಿ ಎಂದು ಕಿಡಿಕಾರಿದೆ.
ಕರ್ನಾಟಕದ ನಂದಿನಿಯ ಮೇಲೆ ಕಣ್ಣು ಹಾಕಿದ ಅಮಿತ್ ಶಾ ಅವರೇ, ನಿಮ್ಮದು KMF ಉದ್ಯೋಗಗಳನ್ನು ಕನ್ನಡಿಗರಿಂದ ಕಿತ್ತು ಉತ್ತರ ಭಾರತೀಯರ ಕೈಗೆ ಕೊಡುವ ಹುನ್ನಾರವೇ? ನಂದಿನಿ ಬ್ರಾಂಡ್ ಮುಳುಗಿಸಿ ಅಮುಲ್‌ನ್ನು ತಂದು ಸ್ಥಾಪಿಸುವ ಷಡ್ಯಂತ್ರವೇ? ಸ್ವಾಭಿಮಾನದ ನಂದಿನಿಯನ್ನು ಮುಳುಗಿಸಿ ರಾಜ್ಯದ ರೈತರನ್ನು ಗುಲಾಮಗಿರಿಗೆ ತಳ್ಳುವ ತಂತ್ರವೇ ಎಂದು ಕುಟುಕಿದೆ.
ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರವು ಲುಂಗಿ ಡಾನ್ಸ್ ಮಾಡ್ತಿದ್ದರೂ ಕೇಂದ್ರ ನಾಯಕರು ತುಟಿ ಬಿಚ್ಚುವುದಿಲ್ಲವೇಕೆ? ಪ್ರಧಾನಿಗೆ ಪತ್ರಗಳ ಮೇಲೆ ಪತ್ರ ಬರೆದರೂ ಸಣ್ಣ ಸ್ಪಂದನೆಯೂ ಇಲ್ಲವೇಕೆ? ಬಿಜೆಪಿ ಹೈಕಮಾಂಡಿಗೆ ಕರ್ನಾಟಕ ಸಮೃದ್ಧವಾದ ಎಟಿಎಂ ಆಗಿದೆಯೇ? ಅಮಿತ್ ಶಾ ಬಂದಿರುವುದು ಎಲಕ್ಷನ್ನಿಗಾ? 40% ಕಲೆಕ್ಷನ್ನಿಗಾ? ಎಂದು ಲೇವಡಿ ಮಾಡಿದೆ.