karnataka election 2023 | ಕಾಂಗ್ರೆಸ್ ದಂಡಯಾತ್ರೆ.. ಎದುರಾಳಿಗಳಿಗೆ ಚೆಕ್ ಮೇಟ್ !
ಬೆಂಗಳೂರು : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ.
ಈ ಬಾರಿ ಅಧಿಕಾರವನ್ನು ಹಿಡಿಯಲೇಬೇಕು ಎಂಬಂತೆ ರಾಜ್ಯ ಕಾಂಗ್ರೆಸ್ ಬಹಳ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದೆ.
ಬಿಜೆಪಿ ಸರ್ಕಾರದ ವಿರುದ್ಧ ಮುಗಿಬೀಳಲು ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಸರ್ಕಾರವನ್ನು ಸಂಕಷ್ಟಕ್ಕೆ ದೂಡುತ್ತಿದೆ.
ಮುಖ್ಯವಾಗಿ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮಾಡಿ ಕಾಂಗ್ರೆಸ್ ಆರಂಭಿಸಿ ಪೇ ಸಿಎಂ ಪೋಸ್ಟರ್ ಅಭಿಯಾನ ಭಾರಿ ಯಶಸ್ಸು ಕಂಡಿದೆ.
ಕಾಂಗ್ರೆಸ್ ನ ಈ ಅಭಿಯಾನ ಬಿಜೆಪಿ ನಾಯಕರ ಬಾಲಕ್ಕೆ ಬೆಂಕಿ ಇಟ್ಟಂತಾಗಿದೆ. ಕಾಂಗ್ರೆಸ್ ನ ಈ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ತಿರುಗೇಟು ಕೊಡಲಾಗದೇ ಮೈಸವರಿಕೊಂಡು ಬಿಜೆಪಿ ನಾಯಕರು ಓಡಾಡುತ್ತಿದ್ದಾರೆ.
ಇದು ಒಂದು ಕಡೆಯಾದ್ರೆ ಸಿದ್ದರಾಮೋತ್ಸವ ಅಭೂತ ಪೂರ್ವ ಯಶಸ್ಸು, ಡಿ.ಕೆ.ಶಿವಕುಮಾರ್ – ಸಿದ್ದರಾಮಯ್ಯ ಜೋಡೆತ್ತು ಕಾನ್ಸೇಪ್ಟ್ ಎಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗಿದೆ. ಸದ್ಯದ ಟ್ರೆಂಡ್ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅನುಕೂಲಕರ ಪರಿಸ್ಥಿತಿಗಳೇ ಹೆಚ್ಚಾಗಿವೆ.

ಇದನ್ನ ಅರಗಿಸಿಕೊಳ್ಳಲು ಪರದಾಡುತ್ತಿರುವ ಬಿಜೆಪಿಗೆ ಭಾರತ್ ಜೋಡೋ ಯಾತ್ರೆ ನುಂಗಲಾರದ ತುತ್ತಾಗಿದೆ.
ಮೇಲ್ನೋಟಕ್ಕೆ ಭಾರತ್ ಜೋಡೋ ಯಾತ್ರೆಯ ಬಗ್ಗೆ ಟೀಕೆ ಮಾಡುತ್ತಿದ್ದರೂ ರಾಹುಲ್ ಯಾತ್ರೆ ಬಗ್ಗೆ ಕೇಸರಿ ಪಡೆಯಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿವೆ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಮಾತು.
ಸದ್ಯ ರಾಜ್ಯ ಬಿಜೆಪಿಯಲ್ಲಿ ಅಯೋಮಯದ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಕೇಸರಿ ಪಾಳಯದಲ್ಲಿ ಈ ಹಿಂದೆ ಇದ್ದ ಜೋಷ್ ಸದ್ಯ ಮಾಯವಾದಂತೆ ಕಾಣುತ್ತಿದೆ.

ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಎದುರಿಸೋದು ಎಂಬ ಪ್ರಶ್ನೆಯ ಜೊತೆಗೆ ರಾಜ್ಯದಲ್ಲಿ ಸಣ್ಣದಾಗಿ ಬೀಸುತ್ತಿರುವ ಆಡಳಿತ ವಿರೋಧಿ ಅಲೆ ಕಮಲಾಕರರ ನಿದ್ದೆಗೆಡಿಸಿದೆ.
ಗಾಯದ ಮೇಲೆ ಬರೆ ಎಳೆದಂತೆ ಕಾಂಗ್ರೆಸ್ ಈಗಾಗಲೇ ಚುನಾವಣೆ ರಣಕಹಳೆಯನ್ನು ಮೊಳಗಿಸಿ ಮುನ್ನುಗ್ಗುತ್ತಿರುವುದು, ದೊಡ್ಡ ದೊಡ್ಡ ಸಮಾವೇಶಗಳು, ಪಾದಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿರುವುದು.
ಮುಖ್ಯವಾಗಿ ಸರ್ಕಾರದ ಭ್ರಷ್ಟಚಾರವನ್ನು ಲೋಪಗಳನ್ನು, ಜನರ ಮುಂದೆ ಇಟ್ಟು ಹಲವಾರು ರೀತಿಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಚೆಕ್ ಮೇಟ್ ಇಡುತ್ತಿದೆ.
ಇದು ಬಿಜೆಪಿಗೆ ಆಘಾತವನ್ನು ನೀಡುತ್ತಿದೆ ಎಂದು ರಾಜಕೀಯ ಪಂಡಿತರು ಅಂದಾಜಿಸುತ್ತಿದ್ದಾರೆ.








